ಖರ್ಚಾಗಿದ್ದು ಕೋಟಿ ಕೋಟಿ, ಸಿಕ್ಕಿದ್ದು ಬರೀ ಲಕ್ಷ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.9
ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹಣ ನೀರಿನಂತೆ ಹರಿದರೂ ಲೆಕ್ಕಕ್ಕೆ ಸಿಕ್ಕಿದ್ದು ಮಾತ್ರ ಬಿಡಿಗಾಸು. ನಿಜ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚುನಾವಣೆಯಲ್ಲಿ ತಾವು ಮಾಡಿದ ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದು, ಈ ಲೆಕ್ಕಾಚಾರವನ್ನು ಗಮನಿಸಿದರೆ ಮತದಾರನೇ ಹೌಹಾರಬೇಕಾಗುತ್ತದೆ.
ಪ್ರಮುಖವಾಗಿ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಣದ ಹರಿವಿನ ಭೋರ್ಗರೆತ ಮಕ್ಕಳ ಬಾಯಿಯ ಚರ್ಚಾ ವಿಷಯವೂ ಆಗಿತ್ತು. ಬಾಯಿ ಲೆಕ್ಕಾಚಾರದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೇ ನೂರು ಕೋಟಿ ರುಪಾಯಿ ಖರ್ಚಾಗಿದ್ದು ಲೆಕ್ಕಕ್ಕೆ ಸಿಗುತ್ತಿತ್ತು. ಆದರೆ, ಇದೀಗ ಆಯೋಗದ ಮುಂದೆ ಸಲ್ಲಿಕೆಯಾಗಿರುವ ಲೆಕ್ಕ ಕೇವಲ ಲಕ್ಷಗಳಿಗೆ ಸೀಮಿತವಾಗಿದೆ.
ಯಾರು ಎಷ್ಟು? ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕೆ.ಎಸ್. ಈಶ್ವರಪ್ಪನವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವೆಚ್ಚದ ವಿವರದಂತೆ ಅವರು ಖರ್ಚು ಮಾಡಿದ್ದು ಕೇವಲ 6,71,522 ಚುನಾವಣೆ ಸಂದರ್ಭದಲ್ಲಿ ಸಮಾವೇಶ, ಪ್ರಚಾರದ ವಿಚಾರಕ್ಕೆ ಬಂದರೆ ಅಬ್ಬರಿಸಿದ್ದ ಬಿಜೆಪಿ ಲೆಕ್ಕ ಕೊಡುವಲ್ಲಿ ಮಾತ್ರ ಕಂಜೂಸುತನ ಮಾಡಿದೆ.
ಈ ಕ್ಷೇತ್ರದಲ್ಲಿ ಅಬ್ಬರವಿಲ್ಲದೇ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್ ಖರ್ಚು ಮಾಡಿದ್ದು, 6,23,181 ರುಪಾಯಿ. ಇಲ್ಲಿನ ಕೆಜೆಪಿ ಅಭ್ಯರ್ಥಿ ರುದ್ರೇಗೌಡರು ವೆಚ್ಚ ಮಾಡಿದ್ದು 6,23,181, ಜೆಡಿಎಸ್ ಅಭ್ಯರ್ಥಿ 5,14,391 ವೆಚ್ಚ ಮಾಡಿದರೆ. ಎಸ್ಡಿಪಿಐ ಅಭ್ಯರ್ಥಿ ಕೆ.ಬಿ. ಬಶೀರ್ ಅಹ್ಮದ್ ಖರ್ಚು ಮಾಡಿದ್ದು 3,98,126 ಎಂದು ಘೋಷಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕೆಜೆಪಿ, ಜೆಡಿಎಸ್ ಅಬ್ಬರ ಹಳ್ಳಿಹಳ್ಳಿಗೂ ತಿಳಿದ ವಿಷಯವೇ. ಆದರೆ, ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಖರ್ಚು ಮಾಡಿದ್ದು 5,23,023 ರುಪಾಯಿ ಮಾತ್ರವಂತೆ. ಅದೇ ರೀತಿ ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮದನ್ ಖರ್ಚು ಮಾಡಿದ್ದು ಕೇವಲ 93,950. ಇಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ 5,74,827 ಖರ್ಚು ಮಾಡಿದ್ದಾರಂತೆ. ಕಿಮ್ಮನೆ ರತ್ನಾಕರ್ 4,88,444 ವೆಚ್ಚ ಮಾಡಿದರೆ, ಬಿಎಸ್ಆರ್ ಅಭ್ಯರ್ಥಿ ಅಶೋಕಮೂರ್ತಿ 5,56,456 ಖರ್ಚು ಮಾಡಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪನವರು ಆಯೋಗಕ್ಕೆ ನೀಡಿರುವ ಲೆಕ್ಕಾಚಾರದಂತೆ ಅವರು ಖರ್ಚು ಮಾಡಿದ್ದು 7,79,001 ಮಾತ್ರ. ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ 3,35,305, ಜೆಡಿಎಸ್ ಅಭ್ಯರ್ಥಿ ಬಳಿಗಾರ್ 3,50,915 ಖರ್ಚು ಮಾಡಿದ್ದಾರೆಂದು ವಿವರ ನೀಡಿದ್ದಾರೆ.
ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಅವರು 4,99,143, ಸಂಗಮೇಶ್ವರ 1,22,518, ಎಂ.ಜೆ. ಅಪ್ಪಾಜಿಗೌಡ 3,41,800 ಖರ್ಚು ಮಾಡಿದ್ದಾರೆ.
ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ರು. 5,58,668, ಬೇಳೂರು ಗೋಪಾಲಕೃಷ್ಣ 2,03,900, ಕೆಜೆಪಿ ಅಭ್ಯರ್ಥಿ ಜಯಂತ್ 1,08,625 ವೆಚ್ಚ ಮಾಡಿದ್ದಾರೆಂದು ಆಯೋಗಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ದಾಖಲಾಗಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 3,79,782, ಬಿಜೆಪಿ ಅಭ್ಯರ್ಥಿ 3,29,683, ಕೆಜೆಪಿ ಅಭ್ಯರ್ಥಿ ರು. 4,01,036, ಪಕ್ಷೇತರ ಅಭ್ಯರ್ಥಿ 4,95,652 ವೆಚ್ಚ ಮಾಡಿದ್ದಾರೆ.
ವಿವರ ನೀಡದ ಅಭ್ಯರ್ಥಿಗಳು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 87 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದರಲ್ಲಿ 58 ಅಭ್ಯರ್ಥಿಗಳು ಚುನಾವಣೆಯಲ್ಲಿ ತಾವು ಮಾಡಿದ ಖರ್ಚು ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ದಾಖಲೆ ಸಹಿತ ನೀಡಿದ್ದಾರೆ. ಇನ್ನೂ 29 ಅಭ್ಯರ್ಥಿಗಳು ಲೆಕ್ಕದ ವಿವರ ನೀಡಿಲ್ಲ. ವಿವರ ನೀಡಲು ಅಭ್ಯರ್ಥಿಗಳಿಗೆ ಜೂನ್ 8 ಕೊನೆ ದಿನವಾಗಿತ್ತು.