ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಟ್ಟಡ ಮಂಜೂರಿಗೆ ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 11 Jun 2013, 11:13 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.10
ಭದ್ರಾವತಿಯ ಬಿ.ಎಚ್ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೂತನ ಕಟ್ಟಡ ಮಂಜೂರು ಮಾಡುವಂತೆ ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿ ಸುಮಾರು 18 ಶಾಲೆಗಳಿವೆ. ಈ ಪೈಕಿ ಭದ್ರಾವತಿಯಲ್ಲಿ 3 ಶಾಲೆಗಳಿದ್ದು, ಭದ್ರಾವತಿಯ ಕಡದಕಟ್ಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯಿಂದ ಕೂಡಿದೆ. ಅಲ್ಲದೇ, ರೈಸ್ ಮಿಲ್‌ವೊಂದರ ಗೋದಾಮಿನಲ್ಲಿ ಶಾಲೆ ನಡೆಯುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಶೌಚಾಲಯವಿಲ್ಲ: ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಾಲಕ- ಬಾಲಕಿಯರಿಗೆಂದು ಪ್ರತ್ಯೇಕ ಕೊಠಗಳಿಲ್ಲ. ಬಾಲಕಿಯರು ಊಟದ ಕೋಣೆಯಲ್ಲಿ ಮಲಗಬೇಕಾದ ಸ್ಥಿತಿ ಇದೆ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕೂಡ ಇಲ್ಲ.
ಹೊರ ಭಾಗದಲ್ಲಿರುವ ಶೌಚಾಲಯಕ್ಕೆ ರಾತ್ರಿ ವೇಳೆ ಹೋಗಲು ಸಮಸ್ಯೆಯುಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳಪೆ ಕಟ್ಟಡಕ್ಕೆ 45 ಸಾವಿರ ಬಾಡಿಗೆ: ರೈಸ್‌ಮಿಲ್‌ನ ಸುತ್ತ ಯಾವುದೇ ಕಿಟಕಿ ಹಾಗೂ ಬಾಗಿಲುಗಳಿಲ್ಲದ ಕಾರಣ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಈಗಾಗಲೇ ಈ ಶಾಲೆಯ ಕಟ್ಟಡಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕಳೆದ ವರ್ಷವೇ ವರದಿ ಸಲ್ಲಿಸಿದೆ.
ಆದರೆ, ಸಮಾಜ ಇಲಾಖೆ ಅಧಿಕಾರಿಗಳು ಶಾಲೆಯನ್ನು ಸ್ಥಳಾಂತರಿಸುವುದಾಗಲಿ ಅಥವಾ ಶಾಶ್ವತ ಕಟ್ಟಡದ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಲಿ ಮಾಡಿಲ್ಲ. ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದೆ ಕಳಪೆಯಿಂದ ಕೂಡಿರುವ ಕಟ್ಟಡಕ್ಕೆ ತಿಂಗಳಿಗೆ 45 ಸಾವಿರ ಮಾಸಿಕ ಬಾಡಿಗೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಶ್ವತ ಕಟ್ಟಡ ನಿರ್ಮಿಸಿ: ತಾಲೂಕಿನ ಕಾರೇಹಳ್ಳಿ ಗ್ರಾಮದ ಸರ್ವೇ ನಂ.8ರಲ್ಲಿ 22 ಎಕರೆ ಜಮೀನನ್ನು ಶಾಲೆಯ ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ಮಂಜೂರು ಮಾಡಲಾಗಿದೆ. ಆದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜಾಧ್ಯಕ್ಷ ಗೋ. ರಮೇಶ್‌ಗೌಡ, ಮಂಜುನಾಥ್, ನರಸಿಂಹ, ಸತೀಶ್, ಕಿಶೋರ್, ರಾಜುನಾಯಕ್, ಶಾಂತಮ್ಮ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement