ಕೊಳೆ ರೋಗ ನಿರ್ವಹಣೆಗೆ ಸಲಹೆ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.10 ಮಲೆನಾಡು ಪ್ರದೇಶಗಳಲ್ಲಿ ಪ್ರಮುಖವಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕಳೆದ ವರ್ಷ ಅಡಕೆಗೆ ಕೊಳೆ ರೋಗ ಬಂದಿರುವ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ಅಡಕೆ ಬೆಳೆಗೆ ಕಾಯಿ ಕೊಲೆ ರೋಗ ಪ್ರಾರಂಭವಾಗುವ ಸಂಭವ ಇದೆ.
ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ, ಬಿರುಸಾದ ಶೀತಭರಿತ ಗಾಳಿ ಮತ್ತು ಶಕ್ತಿಯುತ ಮಳೆ ಹನಿಗಳು ರೋಗ ಹರಡಲು ಸಹಕಾರಿಯಾಗುವುದು ಎಂದು ಅಡಕೆ ಸಂಶೋಧನಾ ಕೇಂದ್ರ ಹೇಳಿದೆ.
ಶೇ.90 ತೇವಾಂಶ: ಜೂನ್ನಿಂದ ಸೆಪ್ಪೆಂಬರ್ ತಿಂಗಳುಗಳಲ್ಲಿ, ವಾತಾವರಣದಲ್ಲಿ ಶೇ.90ಕ್ಕಿಂತ ಹೆಚ್ಚು ತೇವಾಂಶ ಮತ್ತು ಉಷ್ಣಾಂಶ 15 ರಿಂದ 20ಕ್ಕಿಂತ ಕಡಮೆ ಇರುತ್ತದೆ. ಈ ಸನ್ನಿವೇಶ ಕೊಳೆ ರೋಗದ ರೋಗಾಣುಗಳ ಅಭಿವೃದ್ಧಿಗೆ ಪೂರಕವಾಗಿರುವುದು. ಕೊಳೆ ರೋಗ ಲಕ್ಷಣ ಗುರುತಿಸುವುದು ಸುಲಭ. ಈ ಸಮಯದಲ್ಲಿ ಸಾಮಾನ್ಯವಾಗಿ ಎಳೆ ಕಾಯಿಗಳ ತೊಟ್ಟಿನ ಭಾಗಗಳಲ್ಲಿ ನೀರಿನಿಂದ ತೊಯ್ದ ಬೂದುಬಣ್ಣದ ಮಚ್ಚೆಗಳು ಕಂಡು ಬರುವುದು.
ಈ ಮಚ್ಚೆಗಳು ನಂತರ ಇಡೀ ಕಾಯಿಗಳಿಗೆ ಹರಡಿ ಕಾಯಿ ಹಸಿರು ಬಣ್ಣವನ್ನು ಕಳೆದುಕೊಂಡು, ಕ್ರಮೇಣ ಗೊನೆಗಳಿಂದ ಉದುರುತ್ತವೆ. ಅಲ್ಲದೆ ಹಿಂಗಾರದ ಮೊಗ್ಗುಗಳೂ ಸಹ ಕೊಳೆಯುತ್ತವೆ. ರೋಗ ಹೆಚ್ಚಾದಾಗ ಶಿಲೀಂಧ್ರ ರೋಗಾಣುಗಳು ಸುಳಿಗೆ ಹರಡಿ ಇಡೀ ತೊಂಡೆ ತುಂಡಾಗಿ ಬೀಳಬಹುದು ಎಂದು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.
ನಿಯಂತ್ರಣ ಕ್ರಮ: ಈ ರೋಗದ ಸಮಗ್ರ ನಿರ್ವಹಣೆಗೆ ಹಲವು ಕ್ರಮ ಕೈಗೊಳ್ಳಬೇಕಾಗುವುದು. ತೋಟಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು, ರೋಗ ಪೀಡಿತ ಉದುರಿದ ಕಾಯಿಗಳನ್ನು ಆರಿಸಿ ನಾಶಪಡಿಸುವುದು, ತೋಟದಲ್ಲಿರುವ ಇತರೆ ಬೆಳೆಗಳ (ಕೋಕೋ, ಮೆಣಸು, ಲವಂಗ, ಏಲಕ್ಕಿ ಮತ್ತು ದಾಲ್ಚಿನಿ) ಮತ್ತು ತೋಟದ ಸುತ್ತಲೂ ಇರುವ ನೆರಳು ಮರಗಳ ಹೆಚ್ಚುವರಿ ರೆಂಬೆ ಕತ್ತರಿಸಿ ಗಾಳಿಯಾಡುವಂತೆ ಮಾಡಬೇಕು. ತಟಸ್ಥಗೊಳಿಸಿದ ಶೇ.1ರ ಬೋರ್ಡೋ ದ್ರಾವಣವನ್ನು (ಶೇ.25ರಷ್ಟು ತಾಮ್ರದ ಅಂಶವಿರುವ ಮೈಲುತುತ್ತ) ಗೊನೆಗಳಿಗೆ ಸಿಂಪಡಿಸಬೇಕು.
ಬುಡಭಾಗದಲ್ಲಿ ಉದುರಿರುವ ರೋಗ ಪೀಡಿತ ಕಾಯಿಗಳಿದ್ದಲ್ಲಿ, ಬುಡಭಾಗವನ್ನು ಇದೇ ಶೀಲೀಂಧ್ರ ನಾಶಕದಿಂದ ನೆನೆಸಬೇಕು. ಬೋರ್ಡೋದ್ರಾವಣ ಸಿಂಪಡಿಸುವ ವೇಳೆ ಬಿಸಿಲಿನ ವಾತಾವರಣವಿದ್ದರೆ ಒಳ್ಳೆಯದು.
ಬೋರ್ಡೋದ್ರಾವಣಕ್ಕೆ ಬದಲಾಗಿ ಪ್ರತಿ 1 ಲೀಟರ್ ನೀರಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮೆಟಲ್ ಕಿಲ್ಪಸ್ ಮ್ಯಾಂಕೋಜೆಬ್ 72 ಡಬ್ಲೂಪಿ ಮಿಶ್ರಣವನ್ನು ಸೂಕ್ತ ಅಂಟಿನೊಂದಿಗೆ ಬೆರೆಸಿ ಗೊನೆಗಳಿಗೆ ಸಿಂಪಡಿಸಬೇಕು.
ಬೋರ್ಡೋದ್ರಾವಣ ಸಿಂಪಡಿಸುವಾಗ ಸುಳಿಭಾಗಕ್ಕೆ ಔಷಧಿ ಬೀಳುವತೆ ಸಿಂಪಡಿಸಿದರೆ ಸುಳಿಕೊಳೆ ರೋಗ ಬಾಧೆ ಕಡಿಮೆ ಯಾಗುತ್ತದೆ ಎಂದು ಸಂಶೋಧನಾ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಾ.ಎಚ್. ನಾರಾಯಣ ಸ್ವಾಮಿ, ಮುಖ್ಯ ವಿಜ್ಞಾನಿ ಡಾ.ಕೆ.ಎಸ್. ಶೇಷಗಿರಿ ತಿಳಿಸಿದ್ದಾರೆ.