ಗೋಮಾಳ ಮಂಜೂರು: ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ, ಶಿವಮೊಗ್ಗ, ಜೂ.10
ತಾಲೂಕಿನ ದೊಡ್ಡದಾನವಂದಿ ಗ್ರಾಮದಲ್ಲಿರುವ ಸರ್ವೆ 3ರಲ್ಲಿನ 119 ಎಕರೆ ಗೋಮಾಳದ ಜಮೀನನ್ನು ಕೆಲ ಪ್ರಭಾವಿ ವ್ಯಕ್ತಿಗಳು ತಾಲೂಕು ಸಕ್ರಮೀಕರಣ ಸಮಿತಿಯಲ್ಲಿ ಮಂಜೂರು ಮಾಡಿಸಿಕೊಂಡಿದ್ದು, ಈ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ವೆ ನಂ.3ರಲ್ಲಿ 119 ಎಕರೆಯಷ್ಟು ವಿಸ್ತೀರ್ಣದ ಗೋಮಾಳದ ಜಮೀನಿದ್ದು, ದನಕರುಗಳ ಮೇವಿಗಾಗಿ ಅದನ್ನು ಹಿಂದಿನಿಂದಲೂ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಕೆಲ ಪ್ರಭಾವಿ ವ್ಯಕ್ತಿಗಳು, ಬೇರೆಡೆ ಜಮೀನುಗಳನ್ನು ಹೊಂದಿದವರು, ತಾಲೂಕು ಸಕ್ರಮೀಕರಣ ಸಮಿತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಂಜೂರಾತಿ ಮಾಡಿಕೊಂಡು ಇದೀಗ ಒತ್ತುವರಿ ಮಾಡಲು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸರ್ಕಾರಕ್ಕೂ ವಂಚನೆ: ತಾಲೂಕು ಸಕ್ರಮೀಕರಣ ಸಮಿತಿ ಗ್ರಾಮಸ್ಥರ ಗಮನಕ್ಕೆ ಬಾರದಂತೆ ಗ್ರಾಮಕ್ಕೆ ಸಂಬಂಧಪಡದಿರುವ ವ್ಯಕ್ತಿಗಳಿಂದ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದು ಮಂಜೂರು ಮಾಡಿಕೊಟ್ಟಿದೆ. ಈ ಮೂಲಕ ಸರ್ಕಾರಕ್ಕೂ ವಂಚನೆ ಮಾಡಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಗ್ರಾಮಕ್ಕೆ ಸಂಬಂಧ ಪಡದ ಎಂ.ಬಿ. ಕುಮಾರಸ್ವಾಮಿ, ಎಂ. ಶಿವರುದ್ರಪ್ಪ, ಎ.ಎಂ. ಮೀನಾ, ನಾಗೇಶಪ್ಪ, ಈರಮ್ಮ, ಕರಿಯಮ್ಮ, ಕೆಂಚಪ್ಪ, ಜಯಮ್ಮ ಸೇರಿದಂತೆ 9 ಜನರು ಈ ಜಮೀನನ್ನು ಮಂಜೂರು ಮಾಡಿಸಿಕೊಂಡು, ಜೆಸಿಬಿಗಳ ಮೂಲಕ ಜಮೀನಿನ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೇ, ಕುಟುಂಬಗಳಿಗೆ ಈಗಾಗಲೇ ಬೇರೆಡೆ ಜಮೀನುಗಳನ್ನು ಹೊಂದಿವೆ. ಆದರೂ ಸಮಿತಿ ಜಮೀನನ್ನು ಮಂಜೂರು ಮಾಡಿರುವುದು ಅನುಮಾನಕ್ಕಿಡು ಮಾಡಿದೆ ಎಂದು ತಿಳಿಸಿದರು.
ಪರಿಶೀಲನೆಗೆ ಆದೇಶಿಸಿ: ತಹಸೀಲ್ದಾರ್ ಹಾಗೂ ಉಪ-ತಹಸೀಲ್ದಾರ್ ಅವರಿಗೆ 9 ಮಂದಿ ಗೋಮಾಳದ ಬಗ್ಗೆ ಸುಳ್ಳು ಮಾಹಿತಿ ನೀಡಿ, ಸ್ವಾಧೀನಪಡಿಸಿಕೊಂಡಿರುವುದು ಖಂಡನೀಯ. ತಾಲೂಕು ಸಕ್ರಮೀಕರಣ ಸಮಿತಿ ನೀಡಿದ್ದ ಮಂಜೂರಾತಿಯನ್ನು ರದ್ದುಗೊಳಿಸಿ, ದನಕರುಗಳನ್ನು ಮೇಯಿಸಲು ಹಾಗೂ ಗ್ರಾಮದ ಉಪಯೋಗಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು. ಗೋಮಾಳದ ಕುರಿತಾಗಿ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಆದೇಶ ನೀಡಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ರಾಜಪ್ಪ, ವಾಮನಮೂರ್ತಿ, ಪವಿತ್ರ, ಹನುಮಂತಪ್ಪ ಗ್ರಾಮಸ್ಥರು ಇದ್ದರು.