ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿನಾಶದ ಅಂಚಿಗೆ ಶ್ರೀಗಂಧ: ಆತಂಕ

Lingaraj Badiger
Updated On : 11 Jun 2013, 11:06 am

ಕ.ಪ್ರ.ವಾರ್ತೆ ಶಿವಮೊಗ್ಗ  ಜೂ.10
ಜಿಲ್ಲೆಯಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಶ್ರೀಗಂಧ ಇಂದು ಬಹುತೇಕ ವಿನಾಶದ ಅಂಚಿಗೆ ತಲುಪಿದ್ದು, ಮನುಷ್ಯನ ದುರಾಸೆಯಿಂದ ಕಾಡು ನಾಶವಾಗುತ್ತಿದೆ ಎಂದು ಪ್ರಗತಿಪರ ರೈತ ಪ್ರಫುಲ್ಲಚಂದ್ರ ಹೇಳಿದರು.
ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಡಿಲ್ಲದೇ ನಾಡಿನ ಉಳಿವು ಸಾಧ್ಯವಿಲ್ಲ. ಅಲ್ಲದೇ ವಿವಿಧ ರೀತಿಯ ಹಣ್ಣು ತರಕಾರಿ ಹಾಗೂ ಪೌಷ್ಠಿಕಾಂಶ ಯುಕ್ತವಾದ ಆಹಾರೋತ್ಪನ್ನಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ ಎಂದರು.
ಅವ್ಯಾಹತ ದಾಳಿ: ಜನಸಂಖ್ಯೆಯ ಹೆಚ್ಚಳದಿಂದಾಗಿ ಇರುವ ಭೂಪ್ರದೇಶದ ವಿಸ್ತೀರ್ಣ ವಿಕಾಸಗೊಳ್ಳುವುದು ಸಾಧ್ಯವಿಲ್ಲ. ಅಂತೆಯೇ ಮನುಷ್ಯ ಪರಿಸರದ ಮೇಲೆ ಮಾಡುತ್ತಿರುವ ಅವ್ಯಾಹತವಾದ ದಾಳಿಯಿಂದಾಗಿ ಮನುಷ್ಯ ತನ್ನ ಅವನತಿಗೆ ತಾನೇ ಕಾರಣೀಭೂತನಾಗುತ್ತಿದ್ದಾನೆ ಎಂದು ತಿಳಿಸಿದರು.
ಅರಣ್ಯ ನಾಶದಿಂದ ಅರಣ್ಯದಲ್ಲಿರ ಬೇಕಾದ ಪ್ರಾಣಿ, ಪಕ್ಷಿ ಸಂಕುಲಗಳು ಸ್ವಯಂ ರಕ್ಷಣೆಗಾಗಿ ಅನ್ಯಮಾರ್ಗವಿಲ್ಲದೇ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಇದಕ್ಕೆ ಮೂಲ ಕಾರಣ ಮನುಷ್ಯ ಕಾಡನ್ನು ಕಡಿಯುತ್ತಿರುವುದು ಎಂದ ಅವರು. ಪಾಶ್ಚಾತ್ಯ ಕೃಷಿ ವಿಧಾನಗಳ ಅಂಧಾನುಕರಣೆ ಬೇಡ. ನಮ್ಮ ಪರಿಸರಕ್ಕೆ ಪೂರಕವಾದ ಸ್ಥಳೀಯ ಕೃಷಿ ವಿಧಾನಗಳನ್ನೆ ಬಳಸಿ, ಲಾಭದಾಯಕವಾದ ಬೆಳೆ ಬೆಳೆಯಬೇಕು ಎಂದರು.
ಪರಿಸರ ರಕ್ಷಣೆ ಅನಿವಾರ್ಯ: ಭದ್ರಾಕಾಡಾ ಆಡಳಿತಾಧಿಕಾರಿ ಎ.ಎಂ. ಅಣ್ಣಯ್ಯ ಮಾತನಾಡಿ, ಶೇ. 33ರಷ್ಟಿರಬೇಕಾದ ಅರಣ್ಯ ಸಂಪತ್ತು ಇಂದು ಶೇ. 22ಕ್ಕೆ ಬಂದು ತಲುಪಿದೆ. ಮನುಕುಲದ ಏಳಿಗೆಗೆ ಪೂರಕವಾದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ ಎಂದರು.
ಪರಿಸರ ವಿನಾಶದ ಹಂತ ತಲುಪಿದರೆ ಭವಿಷ್ಯದಲ್ಲಿ ಬದುಕು ಸಾಗಿಸುವುದು ಹೇಗೆ ಎಂಬ ಆತಂಕದ ವಾತಾವರಣ ಇಂದು ಸೃಷ್ಠಿಯಾಗಿದೆ ಎಂದ ಅವರು, ವಿವಿಧ ರೀತಿಯ ಮಾಲಿನ್ಯದಿಂದಾಗಿ ಪರಿಸರ ಇಂದು ಕಲುಷಿತಗೊಳ್ಳುತ್ತಿದೆ. ಸುರಕ್ಷಿತವಾದ ಪರಿಸರವನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ನಿರ್ಬಂಧವಿಲ್ಲ: ಇಂದು ಗಂಧದ ಮರಗಳನ್ನು ಬೆಳೆಯಲು ಸರ್ಕಾರದ ಯಾವುದೇ ನಿರ್ಬಂಧವಿಲ್ಲ. ಆದರೆ, ಪರವಾನಿಗೆ ಇಲ್ಲದೇ ಶ್ರೀಗಂಧವನ್ನು ಎಲ್ಲೆಂದರಲ್ಲಿ ಸಾಗಿಸುವಂತಿಲ್ಲ. ಅಲ್ಲದೇ 3ಕೆ.ಜಿ ಗಿಂತ ಹೆಚ್ಚಿನ ಶ್ರೀಗಂಧವನ್ನು ಸಂಗ್ರಹಿಸಿಡುವುದು ಅಪರಾಧ ಎಂದ ಅವರು, ಶ್ರೀಗಂಧ ಬೆಳೆದ ರೈತರು ಸರ್ಕಾರದ ಅಧಿಕೃತ ಸಂಸ್ಥೆಗಳಿಗೆ ಮಾರಾಟ ಮಾಡಿ ಹಣವನ್ನು ಪಡೆದುಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಭದ್ರಾ ಕಾಡಾ ಕಚೇರಿ ಆವರಣದೊಳಗೆ ಸುಮಾರು 10ಸಾವಿರ ಶ್ರೀಗಂಧದ ಬೀಜಗಳನ್ನು ಬಿತ್ತಲಾಯಿತು.
ಕಾರ್ಯಕ್ರಮದಲ್ಲಿ ಉಪ ಆಡಳಿತಾಧಿಕಾರಿ ಎ. ಭರತಪ್ಪ, ಜಂಟಿ ನಿರ್ದೇಶಕ ಬಿ.ಎಚ್. ಮಂಜಪ್ಪ, ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಪ್ಪೇಸ್ವಾಮಿ, ಕೃಷಿ ವಿಜ್ಞಾನಿ ಶ್ರೀಧರ್, ಪ್ರಗತಿಪರ ರೈತ ಸವ್ಯಸಾಚಿ, ಅಧಿಕ್ಷಕ ಅಭಿಯಂತರ ಫಣಿರಾಜ್, ಶಿಕ್ಷಕಿ ನಾಗಮಣಿ ಮತ್ತು ಸ್ಥಳೀಯ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement