ವ್ಯವಹಾರಿಕ ಕಲೆಯಾಗುತ್ತಿರುವ ಭರತನಾಟ್ಯ: ವಿಷಾದ
ಕ.ಪ್ರ.ವಾರ್ತೆ ಸಾಗರ ಜೂ.10
ಭರತನಾಟ್ಯದಂತಹ ಕಲೆ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ವ್ಯವಹಾರಿಕ ಕಲೆಯಾಗಿ ಮಾರ್ಪಾಡಾಗುತ್ತಿರುವುದು ಖೇಧದ ಸಂಗತಿ ಎಂದು ಶೃಂಗೇರಿ ಶಂಕರ ಮಠದ ಅಶ್ವಿನಿ ಕುಮಾರ್ ಹೇಳಿದರು.
ಇಲ್ಲಿನ ನಾಟ್ಯ ತರಂಗ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಋತು ನೃತ್ಯ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಭರತನಾಟ್ಯ ಕುರಿತು ಆಸಕ್ತಿ ಹಾಗೂ ಪ್ರತಿಭೆ ಇದ್ದವರಿಗೂ ಕಲೆ ಮರಿಚಿಕೆಯಾಗುತ್ತಿದೆ ಎಂದರು.
ಆದಿ ದೈವಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕವನ್ನು ಒಳಗೊಂಡ ಭರತನಾಟ್ಯ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.
ಆದರೆ, ಆಧುನಿಕ ಕಲೆಗಳು ಭರತನಾಟ್ಯದಂತಹ ಹಲವಾರು ನೆಲಮೂಲ ಕಲೆಗಳನ್ನು ಹೊಸಕಿಹಾಕುತ್ತಿವೆ. ಆಧುನಿಕತೆಯ ಬೆನ್ನುಬಿದ್ದಿರುವ ಯುವಜನಾಂಗ ನೆಲಮೂಲ ಕಲೆಯ ಅಭ್ಯಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಲೆಯ ಕಲಿಕ ಕೇವಳ ಫ್ಯಾಷನ್ ಆಗದೆ ನಿಜವಾದ ಆಸಕ್ತಿಯಿಂದ ಕಲಿಯುವಂತಾಗಬೇಕು ಎಂದು ಆಶಿಸಿದರು.
ವಿದ್ವಾನ್ ಜನಾರ್ಧನ್ ಮಾತನಾಡಿ, ನಾಟ್ಯತರಂಗ ಸಂಸ್ಥೆ ಋತು ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ಪ್ರತಿ ಋತುವಿಗೊಂದರಂತೆ ಹಮ್ಮಿಕೊಳ್ಳುವ ಮೂಲಕ ಋತುಗಳ ಮಹತ್ವವನ್ನು ಸಾರುವ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಯುವಜನಾಂಗ ಮರೆಯುತ್ತಿರುವ ಈ ಹೊತ್ತಿನಲ್ಲಿ ಅವರಿಗೆ ನೃತ್ಯದ ಮೂಲಕ ಸಂಸ್ಕಾರ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.ನಾಟ್ಯ ತರಂಗದ ಅಧ್ಯಕ್ಷ ಅಂದಗಾರು ಜನಾರ್ಧನ್ ಅಧ್ಯಕ್ಷತೆ ವಹಿಸಿದ್ದರು. ಹೆಗಡೆ, ಡಾ.ರಾಘವೇಂದ್ರ, ಧರ್ಮಯ್ಯ ಇದ್ದರು.