ಗುಟ್ಕಾ ಮಾರಾಟ ಜುಲೈ 10ಕ್ಕೆ ಕೊನೆ
ಶಿವಮೊಗ್ಗ: ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ. ಇವುಗಳ ಶೇಖರಣೆ, ಮಾರಾಟ ಮಾಡಿದರೆ ಗರಿಷ್ಠ 10 ಲಕ್ಷ ದಂಡ ಹಾಗೂ ಸೆರೆವಾಸದ ಶಿಕ್ಷೆ ಅನುಭವಿಸುವ ಎಚ್ಚರಿಕೆಯನ್ನೂ ನೀಡಿದೆ.
ಸದ್ಯ ಒಂದು ತಿಂಗಳ ಅವಕಾಶವನ್ನು ಜಿಲ್ಲಾಡಳಿತ ನೀಡಿದೆ. ಅವಧಿ ನಂತರ ಕಾರ್ಯಾಚರಣೆ ಶುರುವಾಗಲಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಕಾನೂನು ಕ್ರಮ: ಇದಕ್ಕೂ ಮುಂಚೆ ಎಲ್ಲ ಅಂಗಡಿಗಳಿಗೆ ಹಾಗೂ ಡೀಲರ್ಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಹಾಗೂ ಗ್ರಾಮ ಪಂಚಾಯ್ತಿಗಳ ಮೂಲಕ ನೋಟಿಸ್ ಜಾರಿ ಮಾಡಲಾಗುವುದು. ಒಂದು ತಿಂಗಳ ವಾಯಿದೆ ನಂತರ ಜುಲೈನಿಂದ ಪ್ರಕರಣಗಳು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಆರಂಭದಲ್ಲಿ ಒಂದು ತಿಂಗಳ ಮಟ್ಟಿಗೆ ನೋಟಿಸ್ ನೀಡಲಾಗುವುದು. ನಂತರ ಜುಲೈ 10ರಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಅಧಿಕಾರಿಗಳ ಸಭೆ: ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹೊಣೆ ಕಂದಾಯ ಹಾಗೂ ಪೊಲೀಸ್ ಇಲಾಖೆಗಳದ್ದಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಮಂಗಳವಾರ ಸಂಜೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಗುಟ್ಕಾ ಹಾಗೂ ಪಾನ್ ಮಸಾಲಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಈ ಪದಾರ್ಥಗಳ ಮಾರಾಟ ಮತ್ತು ಶೇಖರಣೆ ಮಾಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ 2006ರ ಕಲಂ 57, 58, 59ರ ಉಪ ಕಲಂಗಳ ಅನ್ವಯ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಗರಿಷ್ಠ 10 ಲಕ್ಷ ವರೆಗೆ ದಂಡ ಹಾಗೂ ಗರಿಷ್ಠ ಸೆರೆವಾಸದ ದಂಡನೆ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಆಪ್ತ ಸಮಾಲೋಚನೆ: ವ್ಯಸನಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಆಪ್ತ ಸಮಾಲೋಚನೆ ನಡೆಸುವರು. ಗಂಭೀರ ಪ್ರಕರಣಗಳನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಿ, ಅಲ್ಲಿ ಚಟ ಬಿಡಿಸಲು ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಎಲ್ಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿಗಳಿಗೆ ವಿಪುಲ್ ಬನ್ಸಾಲ್ ತಿಳಿಸಿದರು.
ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ನೌಕರ ವರ್ಗದಲ್ಲೂ ಗುಟ್ಕಾ ವ್ಯಸನಿಗಳಿದ್ದಲ್ಲಿ ಆದ್ಯತೆ ಮೇರೆಗೆ ತಮ್ಮ ಇಲಾಖೆಗಳಲ್ಲಿ ಅಂತಹವರನ್ನು ಆಪ್ತ ಸಮಾಲೋಚನೆಗೆ ಕಳುಹಿಸಿಕೊಡಬೇಕು. ಈ ಸಂಬಂಧ ಎಲ್ಲ ಇಲಾಖೆಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಲ್ಲಾ ವೈದ್ಯಾಧಿಕಾರಿ ಶಿವಣ್ಣ ರೆಡ್ಡಿ ಉಪಸ್ಥಿತರಿದ್ದರು.