ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಕೀಲ ವೃತ್ತಿಗೆ ಡಿಸಿ ಅವಮಾನ: ಧರಣಿ

Lingaraj Badiger
Updated On : 12 Jun 2013, 11:02 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.11
ವಕೀಲ ಸಮೂಹವನ್ನು ಅವಹೇಳನ ಮಾಡುವ ರೀತಿಯಲ್ಲಿ ಜಿಲ್ಲಾಧಿಕಾರಿಯವರು ನಿಂದಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಶಿವಮೊಗ್ಗ ನ್ಯಾಯಾಲಯದ ವಕೀಲರ ತಂಡ ಹೋರಾಟಕ್ಕಿಳಿದಿದೆ. ಆದರೆ, ಕೆಲವು ವಕೀಲರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಸ್ಪಷ್ಟಪಡಿಸಿದ್ದಾರೆ.
ಆಗಿದ್ದಿಷ್ಟು, ಸೋಮವಾರ ಮಧ್ಯಾಹ್ನ 3.45ರ ಸುಮಾರಿಗೆ ತೆರೆದ ನ್ಯಾಯಾಲಯದಲ್ಲಿ (ಡಿಸಿ ಕೋರ್ಟ್) ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ತಡೆಯಾಜ್ಞೆ ನೀಡಿದ್ದಾರೆ, ಈ ಸಂದರ್ಭದಲ್ಲಿ ಏರಿದ ದನಿಯಲ್ಲಿ ವಕೀಲರು ಪ್ರಶ್ನಿಸಿದ್ದಾರೆ, ಜೊತೆಗೆ ಡಿಸಿ ಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಡಿಸಿಯವರು ಉಸುರಿದ ಕೆಲವು ಪದಗಳು ಘಟನೆಗೆ ಕಿಚ್ಚುಹಚ್ಚಲು ಕಾರಣವಾಗಿದೆ.
ವಕೀಲರ ವಾದವೇನು: ವಾದ ಮಂಡಿಸುತ್ತಿದ್ದ ವಕೀಲರಾದ ಎಚ್.ಬಿ. ದೇವೇಂದ್ರಪ್ಪ ಅವರನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನಿಂದಿಸಿದ್ದಾರೆ ಎಂಬುದು ವಕೀಲರ ಆರೋಪವಾಗಿದೆ. ಆರ್‌ಎನಂ 30,2012-13 ಮತ್ತು 312, 2012-13ರ ಪ್ರಕರಣಗಳಲ್ಲಿ 4ನೇ ಎದುರುದಾರರ ಪರವಾಗಿ ವಾದ ಮಂಡಿಸುವಾಗ ಜಿಲ್ಲಾಧಿಕಾರಿಯವರು ವಕೀಲರಿಗೆ, ದೂರ ನಿಂತು ವಾದ ಮಂಡಿಸಿ ನಾನು ಜಿಲ್ಲಾಧಿಕಾರಿ, ನನಗೆ ಇಷ್ಟಬಂದ ಹಾಗೆ ಆದೇಶ ಮಾಡುತ್ತೇನೆ ಎಂದು ಹೇಳುತ್ತಾ, ತಲೆ ನೋವು ಬರುವಂತಹ ವಾದ ಮಂಡನೆ ಬೇಡ... ಬಾಯಿಮುಚ್ಚಿಕೊಂಡು ನ್ಯಾಯಾಲಯದಿಂದ ಹೊರನಡೆ ಎಂದು ಆಂಗ್ಲ ಭಾಷೆಯಲ್ಲಿ ಹೇಳಿದರು. ಈ ಮೂಲಕ ಸಹೋದ್ಯೋಗಿ ವಕೀಲರು ಹಾಗೂ ಕಕ್ಷಿದಾರರ ಮುಂದೆ ನಿಂದಿಸಿ ಕರ್ತವ್ಯಕ್ಕೆ ತಡೆಯೊಡ್ಡಿ ಅವಮಾನ ಮಾಡಿದ್ದಾರೆ ಎಂಬುದು ನೇರ ಆರೋಪ.
 ಇಷ್ಟೇ ಅಲ್ಲದೇ ಅಲ್ಲಿ ಹಾಜರಿದ್ದ ಎಲ್ಲಾ ವಕೀಲರು ಆಕ್ಷೇಪ ವ್ಯಕ್ತಪಡಿಸಿದರೂ ಜಿಲ್ಲಾಧಿಕಾರಿಯವರು ಉಡಾಫೆಯಿಂದ ಮಾತನಾಡಿ, ತಮಗೆ ಮತ್ತು ವಕೀಲರ ಸಮೂಹಕ್ಕೆ ಅವಮಾನ ಮಾಡಿ ಕೋರ್ಟ್ ಕಲಾಪ ನಡೆಸುವುದಿಲ್ಲ ಎಂದು ಹೇಳಿ ಇದ್ದಕ್ಕಿದ್ದಂತೆ ಉಳಿದ ಕೇಸುಗಳನ್ನು ವಿಚಾರಣೆಗೆ ತೆಗೆದುಕೊಳ್ಳದೇ ನ್ಯಾಯಾಲಯದಿಂದ ಹೊರಹೋಗಿದ್ದಾರೆ.
ಇದಾದ ನಂತರ ಪುನಃ ಅರ್ಧಗಂಟೆ ನಂತರ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿ ನನಗೆ ಬೇರೆ ಬೇರೆ ಉದ್ಯೋಗ ಇದೆ. ಆದರೆ, ವಕೀಲರಾದ ನಿಮಗೆ ಇಲ್ಲೇ ಮಣ್ಣು ಹೊರಬೇಕು ಎಂದು ಹೇಳಿ ವಕೀಲರ ಸಮೂಹಕ್ಕೆ ಅಪಮಾನ ಮಾಡಿದರು ಎಂದು ವಕೀಲರ ಗುಂಪು ಡಿಸಿ ವಿರುದ್ಧ ಗುರುತರ ಆರೋಪ ಮಾಡಿದೆ.
ಡಿಸಿ ಹೇಳೋದೇನು: ತಮಗೆ ವಕೀಲರ ಸಮೂಹದ ಬಗ್ಗೆ ಅಪಾರ ಗೌರವವಿದೆ. ತಾವು ವಕೀಲರೊಬ್ಬರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಡಿಸಿ ವಿಪುಲ್ ಬನ್ಸಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ತಮ್ಮಿಂದ ಯಾವುದೇ ಲೋಪವಾಗಿಲ್ಲ. ಯಾರೊಂದಿಗೂ ತಾವು ಅಸಭ್ಯವಾಗಿ ವರ್ತಿಸಿಲ್ಲ ಎಂದು ತಿಳಿಸಿದ್ದಾರೆ. ಡಿಸಿ ಕೋರ್ಟ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಮಗ್ರ ವಿವರಗಳನ್ನು ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತರ ಬಯಸುತ್ತೇನೆ. ಹಾಗೆಯೇ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
 ಕೋರ್ಟ್ ಹಾಲ್‌ನಿಂದ ಹೊರಗೆ ಹೋಗಿ, ತಮಗೆ ಬೇರೆ ಉದ್ಯೋಗವಿದೆ ಎಂಬಿತ್ಯಾದಿ ಮಾತುಗಳು ತಮ್ಮ ಬಾಯಿಯಿಂದ ಬಂದಿಲ್ಲ. ಹತ್ತಿರ ನಿಂತು ಜೋರಾಗಿ ವಾದ ಮಾಡುತ್ತಿದ್ದ ವೇಳೆ ಕೊಂಚ ಮೆಲ್ಲಗೆ ಮಾತನಾಡಿ ಎಂದು ಹೇಳಿದ್ದು ನಿಜ.
ಆದರೆ, ತಾವು ಹೇಳದೆ ಇರುವುದನ್ನೆಲ್ಲಾ ಹೇಳಲಾಗಿದೆ ಎಂದು ಆರೋಪ ಮಾಡುತ್ತಿರುವುದು ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
 ಪ್ರಕರಣ ನಡೆಸದೆ ಏಕಾಏಕಿ ನಿರ್ಗಮಿಸಿಲ್ಲ. ಬಾಕಿ ಉಳಿದಿದ್ದ ಪ್ರಕರಣ ವಿಲೇವಾರಿ ಮಾಡಲಾಗಿದೆ. ಇತರೆ ವಕೀಲರು ತಮ್ಮ ವಾದ ಮಂಡಿಸಿದ್ದಾರೆ ಎಂದು ಹೇಳಿದ ಅವರು, ಪ್ರಕರಣವೊಂದಕ್ಕೆ ತಡೆಯಾಜ್ಞೆಯ ಆದೇಶ ಹೊರಡಿಸಿದೆ, ತಮ್ಮ ವಿರುದ್ಧ ಆದೇಶ ಬಂದಿದ್ದಕ್ಕೆ ಆ ವಕೀಲರು ಜೋರಾಗಿ ಮಾತನಾಡಿ ಡಿಸಿ ಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದರು. ಈ ರೀತಿ ಮಾತನಾಡದಂತೆ ತಾವು ಸಲಹೆ ನೀಡಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
ಡಿಸಿ ಕೋರ್ಟ್‌ಗೆ ತಮ್ಮದೇ ಆದ ನೀತಿ-ನಿಯಮಗಳಿವೆ. ತಾವು ನೀಡುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ. ನ್ಯಾಯಾಂಗ ನಿಂದನೆಯ ವಿಷಯ ಡಿಸಿ ಕೋರ್ಟ್‌ಗೂ ಅನ್ವಯವಾಗುತ್ತದೆ ಎಂದವರು ಹೇಳಿದ್ದಾರೆ.
ಪ್ರತಿಭಟನೆ: ನ್ಯಾಯಾಂಗ ವ್ಯವಸ್ಥೆಯನ್ನೇ ಅಪಮಾನಗೊಳಿಸಿರುವ ಜಿಲ್ಲಾಧಿಕಾರಿಯವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ವಕೀಲರ ಸಂಘದ ಸದಸ್ಯರು ರಾಜ್ಯಪಾಲರು, ಸಭಾಧ್ಯಕ್ಷರಿಗೆ ಫ್ಯಾಕ್ಸ್ ಮೂಲಕ ಮನವಿ ಅರ್ಪಿಸಿದ್ದಾರೆ.
ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ದೌಡಾಯಿಸಿದ ವಕೀಲರು ಘೋಷಣೆ ಕೂಗಿ ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಈ ಸಂದರ್ಭದಲ್ಲಿ ವಕೀಲರಾದ ದೇವೇಂದ್ರಪ್ಪ, ಈಸೂರು ಲೋಕೇಶ್, ಎನ್. ನಾಗೇಶ್, ಶ್ರೀಪಾಲ್, ಎನ್. ಕುಮಾರ್, ನಾರಾಯಣ, ಬಂಗಾರಪ್ಪ, ಮಂಜುಳಾದೇವಿ, ವಿರೂಪಾಕ್ಷಪ್ಪ, ವಿದ್ಯಾರಾಣಿ ಮೊದಲಾದವರುಹಾಜರಿದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement