ವಿಶ್ವ ಪರಿಸರ ದಿನಾಚರಣೆ
ಭದ್ರಾವತಿ: ಮಾಚೇನಹಳ್ಳಿಯಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಶುಶ್ರುತ ಬಯೋ ಮೆಡಿಕಲ್ ಮ್ಯಾನೇಜ್ಮೆಂಟ್ ಸೊಸೈಟಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಸೊಸೈಟಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗದ ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಸಿ.ಎಂ. ಸತೀಶ್ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಡಾ. ಎಚ್.ಆರ್. ನರೇಂದ್ರಬಾಬು, ನಿವೃತ್ತ ಮುಖ್ಯ ಅಧ್ಯಕ್ಷ ಡಾ. ಕೆ.ಬಿ. ಶೇಖರ್ ಮತ್ತು ಹಿರಿಯ ಪ್ರವರ್ತಕರು ಹಾಗೂ ನಿರ್ದೇಶಕ ಡಾ. ವೆಂಕಟರಾವ್ ಮತ್ತು ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿಯ ಶಿವಮೊಗ್ಗ ವಲಯಾಧಿಕಾರಿ ಹರಿಶಂಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಶಿವಮೊಗ್ಗ: ಪಿಇಎಸ್ಐಟಿಎಂ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಇ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಪಿಇಎಸ್ ಟ್ರಸ್ಟ್ನ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ಪರಿಶ್ರಮ ಮತ್ತು ಶ್ರದ್ಧೆ ವಿದ್ಯಾರ್ಥಿಗಳ ಮಂತ್ರವಾಗಬೇಕು. ನಿರಂತರವಾಗಿ ಓದುವುದರಿಂದ ಮಾತ್ರ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಪದವಿ ಮುಗಿದ ನಂತರ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಚಿಂತೆ ಸಾಮಾನ್ಯವಾಗಿ ಕಂಡು ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಸುರೇಶ್ಚಂದ್ರ ಮೋಹನ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಇದ್ದರು.
ಪಡಿತರ ಬಿಡುಗಡೆ
ಶಿವಮೊಗ್ಗ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜೂನ್ ಮಾಹೆಗೆ ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಿದೆ. ಪಡಿತರ ವಿತರಣೆ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿವಮೊಗ್ಗ- 08182-222203, ಶಿವಮೊಗ್ಗದ ಅನೌಪಚಾರಿಕ ಪಡಿತರ ಪ್ರದೇಶ ಸಹಾಯಕ ನಿರ್ದೇಶಕರು, ದೂ- 08182 250110, ಭದ್ರಾವತಿ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ದೂ- 08282 263444, ಆಯಾ ತಾಲೂಕುಗಳ ತಹಸೀಲ್ದಾರ್ ಕಚೇರಿಯ ಆಹಾರ ವಿಭಾಗಗಳಾದ ಶಿವಮೊಗ್ಗ ದೂ- 08182 277045, ಭದ್ರಾವತಿ ದೂ-08282 265144, ಸಾಗರ ದೂ- 08183 220031, ಶಿಕಾರಿಪುರ 08187222058, ತೀರ್ಥಹಳ್ಳಿ ದೂ- 08181 220160, ಸೊರಬ ದೂ- 08184 272466, ಹೊಸನಗರ- 08185 221115 ಇವರನ್ನು ಸಂಪರ್ಕಿಸಬಹುದು.