ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧಿಕಾರಿಗಳ ಕಿರುಕುಳ: ಶಿವಮೂರ್ತಿ ಆರೋಪ

Lingaraj Badiger
Updated On : 14 Jun 2013, 10:46 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.13
ಭದ್ರಾವತಿ ಎಂಪಿಎಂ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಕ್ಕಾಗಿ ನನ್ನ ಹಾಗೂ ಕಾರ್ಮಿಕರ ಮೇಲೆ ಮೇಲಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರು ಕಿರುಕುಳ ನೀಡುತ್ತಿದ್ದಾರೆ ಎಂದು ಎಪಿಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆ ಉದ್ಯೋಗಿಗಳ ಸಂಘದ ಅಧ್ಯಕ್ಷ ಶಿವಮೂರ್ತಿ ನೇರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರುಕೊಟ್ಟ ಕಾರಣಕ್ಕಾಗಿಯೇ ನನ್ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದಂತೆ ತೋರಿಸಿ ಇದೀಗ ಕೆಲಸದಿಂದ ಅಮಾನತು ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ನಷ್ಟಕ್ಕೆ ನಿಕಟಪೂರ್ವ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರೇ ನೇರ ಹೊಣೆ ಎಂದ ಅವರು, ಜ್ಞಾನೇಂದ್ರ ಅಧ್ಯಕ್ಷರಾದ ಆರಂಭದಲ್ಲಿ ಕಾರ್ಖಾನೆ 32 ಕೋಟಿ ನಷ್ಟದಲ್ಲಿತ್ತು. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ನಷ್ಟದ ಪ್ರಮಾಣ 350 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ದುಂದುವೆಚ್ಚ ಮತ್ತು ಅವ್ಯವಹಾರ ಪ್ರಮುಖ ಕಾರಣ ಎಂದು ಟೀಕಿಸಿದರು.
ಅನುದಾನ ಬಳಕೆ ಮಾಡಿಲ್ಲ: ಸರ್ಕಾರವು ಕಾರ್ಖಾನೆ ಅಭಿವೃದ್ಧಿಗಾಗಿ 100 ಕೋಟಿ ಅನುದಾನ ನೀಡಿದ್ದರೂ ಅದರ ಸಮರ್ಪಕ ಬಳಕೆ ಮಾಡಿಕೊಳ್ಳದ ಕಾರಣ ಕಾರ್ಖಾನೆ ನಷ್ಟವನ್ನೇ ಅನುಭವಿಸುವಂತಾಗಿದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರಿಗೂ ಸರಿಯಾದ ಸಮಯದಲ್ಲಿ ಹಣ ಪಾವತಿಸಿಲ್ಲ, ಹೀಗಾಗಿ ಬೆಳೆಗಾರರು ಕಬ್ಬು ಸರಬರಾಜು ಮಾಡುವುದನ್ನೇ ಬಿಟ್ಟಿದ್ದಾರೆ ಎಂದು ಹೇಳಿದರು.
ಗೆಸ್ಟ್ ಹೌಸ್ ಕಡಿಮೆ ಬೆಲೆಗೆ ಮಾರಾಟ: ಕಾರ್ಖಾನೆ ನಷ್ಟದಲ್ಲಿರುವುದರಿಂದ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ.
ಆದರೆ, ಆಡಳಿತ ಮಂಡಳಿಯವರಿಗೆ ಎಲ್ಲಾ ಸೌಲಭ್ಯಗಳೂ ಲಭ್ಯವಾಗುತ್ತಿವೆ. ಕಾರ್ಖಾನೆ ಅಧ್ಯಕ್ಷರಾಗಿದ್ದ ವೇಳೆ ಆರಗ ಜ್ಞಾನೇಂದ್ರ ಸಾಕಷ್ಟು ದುಂದು ವೆಚ್ಚ ಮಾಡಿದ್ದಾರೆ.
ಮಾತ್ರವಲ್ಲದೇ ಮುಂಬೈನಲ್ಲಿದ್ದ ಎಂಪಿಎಂ ಗೆಸ್ಟ್ ಹೌಸ್‌ನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ವಿವರಿಸಿದರು.
ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು: ಎಂಪಿಎಂ ಕಾರ್ಖಾನೆಯಲ್ಲಿ  ನಡೆದಿರುವ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಜಿ ಅಧ್ಯಕ್ಷ ಆರಗ ಜ್ಞಾನೇಂದ್ರ ಹಾಗೂ ಇತರರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ತಮ್ಮನ್ನು ಅಮಾನತು ಮಾಡಲಾಗಿದೆ.
ಹೀಗೆ ಕಾರ್ಖಾನೆಯ ಅವ್ಯವಹಾರ ಪ್ರಶ್ನಿಸಿದವರನ್ನು ಅಮಾನತು ಮಾಡುತ್ತಿರುವುದರಿಂದ ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಶಿವಮೂರ್ತಿ ಹೇಳಿದರು.

ಲೋಕ ಪೊಲೀಸರಿಂದ ಮಂದ ತನಿಖೆ
ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಶಿವಮೂರ್ತಿ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದರೂ ಸಹ ಲೋಕಾ ಪೊಲೀಸರು ಶಿವಮೂರ್ತಿ ನೀಡಿದಂತಹ ದಾಖಲೆ ಇಟ್ಟುಕೊಂಡು ತನಿಖೆಯನ್ನು ಮಂದಗತಿಯಲ್ಲಿ ನಡೆಸುತ್ತಿದ್ದಾರೆ ಹೊರತು ಬೇರೆ ದಾಖಲೆಗಳ ಸಂಗ್ರಹಣೆ ಮತ್ತು ಸಾಕ್ಷಿ ಹೇಳಿಕೆ ಪಡೆಯುತ್ತಿಲ್ಲ ಎಂದು ಶಿವಮೂರ್ತಿ ಪರ ವಕೀಲ ಕೆ.ಪಿ. ಶ್ರೀಪಾಲ್ ಇದೇ ಸಂದರ್ಭದಲ್ಲಿ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement