ಆಟೋರಾಜ ಚಿತ್ರತಂಡ ಜಾಥಾ
ಶಿವಮೊಗ್ಗ: ತಾವು ನಟಿಸಿದ 19ನೇ ಚಿತ್ರ ಗಣಪ ಇನ್ ಆಟೋ ರಾಜ ಜೂನ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ಮುಗಿಸಿದ್ದು, ಶಿವಮೊಗ್ಗದಲ್ಲಿ ಚಿತ್ರದ ಪ್ರಮೋಶನ್ಗಾಗಿ ಬಂದಿದ್ದು, ವನಮಹೋತ್ಸವ, ರಕ್ತದಾನ ಶಿಬಿರದ ಉದ್ಘಾಟನೆ, ಆಟೋಗಳೊಂದಿಗೆ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿ ಚಿತ್ರಕ್ಕೆ ಪೂರ್ವಭಾವಿ ಪ್ರಚಾರ ನಡೆಸಲಾಗುತ್ತಿದೆ ಎಂದರು.
ಉತ್ತಮ ಮನೋರಂಜನೆ: ಪ್ರೇಮಕಥೆ, ನವಿರಾದ ಹಾಸ್ಯ, ಸಾಹಸಮಯ, ಸೆಂಟಿಮೆಂಟ್ ಎಲ್ಲವೂ ಹೊಂದಿದ್ದು, ಇಡೀ ಕುಟುಂಬ ಎರಡು ಗಂಟೆಕಾಲ ಕುಳಿತು ಮನೋರಂಜನೆ ಪಡೆಯುವ ಚಿತ್ರ ಇದಾಗಿದ್ದು, ಅತ್ಯುತ್ತಮವಾಗಿ ಮೂಡಿಬಂದಿದೆ. ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದ ಚಿತ್ರವಾಗಲಿದೆ ಎಂದು ವಿವರಿಸಿದರು.
ನಿರ್ದೇಶಕ ವಿಶ್ವ ಕಾರಿಯಪ್ಪ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಗಾಯಕ ಚಂದನ್, ಅರುಣ ಇದ್ದರು. ನಂತರ ನಟ ಗಣೇಶ್, ಇಲ್ಲಿನ ಚೌಕಿ ಮಠದಲ್ಲಿ ಕದಳಿ ಮಹಿಳಾ ಸಂಘ ಹಾಗೂ ಜೆಸಿಐ ವತಿಯಿಂದ ನಡೆದ ವನಮಹೋತ್ಸವದಲ್ಲಿ ಭಾಗವಹಿಸಿ, ರೋಟರಿ ಮಿಡ್ಟೌನ್ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿದರು. ನಂತರ ಆಟೋಗಳೊಂದಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.