ಬಿಎಸ್‌ವೈ ಬಗ್ಗೆ ತಲೆಕೆಡಿಸಿಕೊಳ್ಬೇಡಿ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.13
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತೆ ಬಿಜೆಪಿಗೆ ಬರುತ್ತಾರೋ ಇಲ್ಲವೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನರೇಂದ್ರ ಮೋದಿ ಪ್ರಧಾನಮಂತ್ರಿಯಾಗುವತ್ತ ಗಮನಹರಿಸಿ, ಪಕ್ಷದ ಸಂಘಟನೆಗೆ ಶ್ರಮಿಸಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆ ದೃಷ್ಟಿಯಿಂದ ಹಿರಿಯರು ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೆ ಬದ್ಧರಾಗಿರಬೇಕಾದ್ದು ನಮ್ಮ ಕರ್ತವ್ಯ. ಯಾರನ್ನು ಅವರು ಬರಮಾಡಿಕೊಳ್ಳುತ್ತಾರೆ, ಯಾರು ಇಲ್ಲ ಎಂಬುದರ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದರು.
ನಮಗೆ ಸಂಬಂಧವಿಲ್ಲ: ಮತ್ತೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆದುಕೊಳ್ಳಬೇಕೋ ಬೇಡವೋ ಎಂಬ ಚರ್ಚೆ ಕೇವಲ ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದ ಪಾಳೆಯದಲ್ಲಿ ನಡೆಯುತ್ತಿದೆ. ಈ ಚರ್ಚೆ ಪಕ್ಷದ ಕಾರ್ಯಕರ್ತರಲ್ಲಿ ನಡೆಯುತ್ತಿಲ್ಲ. ಈ ಕುರಿತಂತೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪ ಪಕ್ಷಕ್ಕೆ ಬರುತ್ತಾರೋ ಇಲ್ಲವೋ ಎಂಬುದು ನಮಗೆ ಸಂಬಂಧಿಸಿದ ವಿಷಯಗಳಲ್ಲ ಎಂದು ಸೂಚ್ಯವಾಗಿ ಹೇಳಿದರು.
ದೇಶದ ಜನರ ಅಪೇಕ್ಷೆ ಎನ್‌ಡಿಎ ಅಧಿಕಾರಕ್ಕೆ ಬರುವುದಾಗಿದೆ. ಅಟಲ್ ಬಿಹಾರಿ ವಾಜಪೇಯಿರಂತೆ ಮೋದಿ ಪ್ರಧಾನಿಯಾದಲ್ಲಿ ದೇಶದ ಚಿತ್ರಣ ಬದಲಾಗುತ್ತದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರು ಘೋಷಣೆ ಮಾಡುವುದಕ್ಕೂ ಮೊದಲು ಪಕ್ಷದ ಹಿರಿಯ ಮುಖಂಡ ಆಡ್ವಾಣಿಯವರ ಒಪ್ಪಿಗೆ ಪಡೆಯಲಾಗಿತ್ತು.
ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನರೇಂದ್ರ ಮೋದಿ ಅವರನ್ನು ನೇಮಿಸಲಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವಹಿಸಬೇಕೆಂದರು.
ಬಿಜೆಪಿ ಗೆಲ್ಲಿಸಿ: ಪಕ್ಷದ ಬಗ್ಗೆ ಆಡ್ವಾಣಿ ಅವಗಿರಿರುವ ಕಳಕಳಿಯನ್ನು ಎಲ್ಲಾ ಕಾರ್ಯಕರ್ತರು ಅರಿತುಕೊಳ್ಳಬೇಕಿದೆ. ಅಲ್ಲದೇ ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಗ್ಗದ ಪ್ರಚಾರಕ್ಕೆ ಮುಂದಾಗಿದೆ. ಹೀಗಾಗಿಯೇ ಇತ್ತೀಚೆಗೆ ಗುಜರಾತ್ ಚುನಾವಣೆಯಲ್ಲಿ ಗೋಧ್ರಾ ಹತ್ಯಾಕಾಂಡ ಪ್ರಕರಣ ಮುಂದಿಟ್ಟುಕೊಂಡು ಹಿಂದುಗಳನ್ನು ಮುಸ್ಲಿಂರನ್ನು ಒಡೆಯುವ ಪ್ರಯತ್ನ ಕಾಂಗ್ರೆಸ್ ಕಡೆಯಿಂದ ನಡೆದಿದೆ ಎಂದ ಅವರು, ಗುಜರಾತ್‌ನಲ್ಲಿ ಮುಸ್ಲಿಮರು ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಅವರನ್ನು ಬೆಂಬಲಿಸಿದ್ದಾರೆಂದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಹಾಜರಿದ್ದರು.