ಸಹಕಾರ ಸಂಘಗಳ ಚುನಾವಣೆಗೆ ಆಯೋಗ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.13
ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ಸಹಕಾರ ಸಂಘಗಳ ಚುನಾವಣೆಗಳನ್ನು ಇನ್ನುಮುಂದೆ ಸಹಕಾರ ಚುನಾವಣಾ ಆಯೋಗ ನಡೆಸಲಿದೆ. ಈ ಹಿನ್ನಲೆಯಲ್ಲಿ ಸಹಕಾರ ಚುನಾವಣಾ ಆಯೋಗವು ಗುರುವಾರ ನಗರದಲ್ಲಿ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ ಹಾಗೂ ಚುನಾವಣೆ ಕುರಿತು ಕಾರ್ಯಾಗಾರವನ್ನು ಆಯೋಜಿಸಿತ್ತು. ಸಹಕಾರ ಚುನಾವಣಾ ಆಯುಕ್ತ ಎನ್.ಸಿ. ಮುನಿಯಪ್ಪ ಹಾಗೂ ಕಾರ್ಯದರ್ಶಿ ಬಿ.ಎಚ್. ಮಂಜಪ್ಪ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಹಕಾರಿಗಳಿಗೆ ಹಲವು ಮಾಹಿತಿ ನೀಡಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮುನಿಯಪ್ಪ, ಈ ಹಿಂದೆ ಸ್ಥಳೀಯ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ಸಹಕಾರ ಚುನಾವಣಾ ಆಯೋಗದ ನೇತೃತ್ವದಲ್ಲಿ ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲಾಗುವುದು ಎಂದರು.
36 ಸಾವಿರ ಸಹಕಾರ ಸಂಘಗಳು: ರಾಜ್ಯದಲ್ಲಿ 36 ಸಾವಿರ ಸಹಕಾರ ಸಂಘಗಳಿದ್ದು, ವಿಸರ್ಜನೆಯಾಗಿರುವ 4 ಸಾವಿರ ಸಂಘಗಳನ್ನು ಹೊರತುಪಡಿಸಿ ಉಳಿದ ಸಂಘಗಳಿಗೆ ಚುನಾವಣೆ ನಡೆಯುವುದು. ಇದೇ ವರ್ಷ ಸೆಪ್ಟಂಬರ್ನಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಗೆ, ಅಕ್ಟೋಬರ್ನಲ್ಲಿ ಮಧ್ಯಮ ಸಂಘಗಳು, ನವೆಂಬರ್ನಲ್ಲಿ ಫೆಡರಲ್ ಸಂಘಗಳು, ಡಿಸೆಂಬರ್ನಲ್ಲಿ ರಾಜ್ಯಮಟ್ಟದ ಸಂಘಗಳಿಗೆ ಚುನಾವಣೆ ನಡೆಯುವುದು ಎಂದರು.
ವ್ಯವಸ್ಥಿತ ಚುನಾವಣೆ: ಭಾರತ ಚುನಾವಣಾ ಆಯೋಗವು ಚುನಾವಣೆ ನಡೆಸುವ ಮಾದರಿಯಲ್ಲಿಯೇ ಕೆಲವು ಮಾರ್ಪಾಡುಗಳೊಂದಿಗೆ ವ್ಯವಸ್ಥಿತವಾಗಿ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದ ಅವರು, ಐದು ವರ್ಷ ಪೂರ್ಣಗೊಂಡ ಸಹಕಾರಿ ಸಂಸ್ಥೆಗಳಿಗೆ ಸಾಮಾನ್ಯ ಚುನಾವಣೆ, ಸಂಘಗಳ ಪದಾಧಿಕಾರಿಗಳ ಆಯ್ಕೆ ಹಾಗೂ ಆಡಳಿತ ಮಂಡಳಿಯ ರಿಕ್ತ ಸ್ಥಾನಗಳಿಗೆ ಚುನಾವಣೆ ನಡೆಸುವ ಜವಾಬ್ದಾರಿ ಆಯೋಗದ ಮೇಲಿದೆ ಎಂದರು.
ಸಾರ್ವತ್ರಿಕ ಚುನಾವಣೆ ಮಾದರಿಯಂತೆಯೇ ಚುನಾವಣಾಧಿಕಾರಿಗಳು, ವೀಕ್ಷಕರು ಸೇರಿದಂತೆ ಹಲವರನ್ನು ನೇಮಕ ಮಾಡಲಾಗುವುದು. ಚುನಾವಣೆ ಘೋಷಣೆಯಾದಾಗಿನಿಂದ ಮುಕ್ತಾಯವಾಗುವವರೆಗೂ ಇವರು ಸಹಕಾರ ಚುನಾವಣಾ ಆಯೋಗದ ಅಡಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಮುನಿಯಪ್ಪ ಹೇಳಿದರು.
ಸಾಫ್ಟ್ವೇರ್ ಮೂಲಕ ನೇಮಕ: ರ್ಯಾಂಡಮೈಜೇಷನ್ ಪ್ರಕ್ರಿಯೆ ಮೂಲಕ ಚುನಾವಣಾಧಿಕಾರಿಗಳಿಗೆ ಕರ್ತವ್ಯ ನಿಯೋಜಿಸಲಾಗುವುದು. ಸಾಫ್ಟ್ವೇರ್ ಮೂಲಕ ಈ ನೇಮಕ ನಡೆಯಲಿದ್ದು, ಬೇಕಾದ ಅಧಿಕಾರಿಗಳನ್ನು ಸಂಘಗಳು ನಿಯೋಜಿಸಿಕೊಳ್ಳುವುದು ಇನ್ನುಮುಂತೆ ಸಾಧ್ಯವಿಲ್ಲ. ಸಹಕಾರ ಇಲಾಖೆ ಮಾತ್ರವಲ್ಲದೇ ಬೇರೆ ಇಲಾಖೆ ಅಧಿಕಾರಿಗಳ ಸೇವೆಯನ್ನೂ ಸಹ ಪಡೆಯಲಾಗುವುದು ಎಂದರು.
ಆಯೋಗ ಅಸ್ತಿತ್ವಕ್ಕೆ ಬರುವ ಮುನ್ನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡುತ್ತಿದ್ದ ಮತದಾರರ ಪಟ್ಟಿ ತಯಾರಿಕೆಯ ಜವಾಬ್ದಾರಿಯೂ ಆಯೋಗದ್ದೇ ಆಗಿದೆ. ಸಹಕಾರ ಸಂಘದ ನಿಯಮಾನುಸಾರ ನೋಂದಾಯಿತ ಮತ್ತು ಅನರ್ಹರಲ್ಲದ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ ಎಂದರು.
ಕಳೆದ ಮಾರ್ಚ್ನಲ್ಲಿ ನಡೆಸಬೇಕಾಗಿದ್ದ ರಾಜ್ಯ ಸಂಘಗಳ ಚುನಾವಣೆಯನ್ನು ಸೆಪ್ಟಂಬರ್- ಅಕ್ಟೋಬರ್ನಲ್ಲಿ ನಡೆಸಲಾಗುವುದು. ಶಿವಮೊಗ್ಗ ಜಿಲ್ಲೆಯ 130 ಸಹಕಾರ ಸಂಘಗಳ ಚುನಾವಣೆಯನ್ನು ಸೆಪ್ಟಂಬರ್ ಮಾಹೆಯಲ್ಲಿ ನಡೆಸಲಾಗುವುದೆಂದರು.
ಪತ್ರಿಕಾಗೋಷ್ಟಿಯಲ್ಲಿ ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್, ಎಸ್. ಮಂಜಪ್ಪ, ಸಿ. ವಿಶ್ವನಾಥಯ್ಯ ಮುಂತಾದವರು ಉಪಸ್ಥಿತರಿದ್ದರು.