ಪರಿಸರ ಆರಾಧನಾ ಮನೋಭಾವ ಬೆಳೆಯಲಿ
ಕ.ಪ್ರ. ವಾರ್ತೆ ಸಾಗರ ಜೂ.15
ಪರಿಸರದ ಕುರಿತು ನಮ್ಮಲ್ಲಿ ಕುವೆಂಪು ಅವರಲ್ಲಿದ್ದ ಆರಾಧಿಸುವ ಮನೋಭಾವ ಹಾಗೂ ತೇಜಸ್ವಿಯವರಲ್ಲಿದ್ದ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ವೃಕ್ಷಲಕ್ಷ ಆಂದೋಲನ, ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಹಾಗೂ ಭೀಮನಕೋಣೆಯ ಗ್ರಾಮ ಅರಣ್ಯ ಸಮಿತಿ ಜಂಟಿಯಾಗಿ ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಮಲೆನಾಡು ಫಲ-ವೃಕ್ಷಗಳ ಮೇಳದಲ್ಲಿ ಫಲ-ವೃಕ್ಷಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೂರ ನಡೆ: ಆಧುನಿಕತೆಯ ಹೆಸರಿನಲ್ಲಿ ಮರ ಕಡಿಯುವ ಸಂಸ್ಕೃತಿ ಬೆಳೆದು ಮರ ಬೆಳೆಸುವ ಆಸಕ್ತಿ ಕಡಿಮೆಯಾಗುತ್ತಿದೆ. ಹಿಂದೆ ತಪೋವನ, ಮಹಾವನ ಹಾಗೂ ಶ್ರೀವನ ಎಂಬ ಮೂರು ಹಂತದಲ್ಲಿ ಅರಣ್ಯ ಸಂರಕ್ಷಣೆ ಮಾಡಲಾಗುತ್ತಿತ್ತು.
ಹಳ್ಳಿಗರು ಮರ ಕಡಿಯಬೇಕಾದರೆ ಪ್ರಾರ್ಥನೆ ಮಾಡಿ, ತಪ್ಪಿಗೆ ಕ್ಷಮೆ ಯಾಚಿಸುವ ಸಂಪ್ರದಾಯ ಇತ್ತು. ಈಗ ಅರಣ್ಯದ ಜೊತೆ ನಾವು ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಶತಮಾನಗಳ ಕಾಲ ಬದುಕುವ ವೃಕ್ಷಗಳನ್ನು ಕೆಲವೇ ವರ್ಷ ಬದುಕುವ ನಮಗೆ ಕಡಿಯುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದ ಡಿಸೋಜ, ಬೇರೆ ಬೇರೆ ಕಾರಣಗಳಿಗಾಗಿ ದೇಶದಲ್ಲಿ ಪ್ರತಿವರ್ಷ 1.3 ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ನಾಶಮಾಡುತ್ತಿರುವ ನಾವು ಅದರ ರಕ್ಷಣೆ ಮಾಡುತ್ತಿದ್ದೇವೆ ಎಂಬ ಭಾಷಣ ಮಾತ್ರ ಮಾಡುತ್ತೇವೆ ಎಂದು ಛೇಡಿಸಿದರು.
ಭರವಸೆ ನೀಡಬೇಕು: ಮೇಳ ಉದ್ಘಾಟಿಸಿದ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಅರಣ್ಯ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು.
ರಾಜಕೀಯ ಪಕ್ಷಗಳು ಇಂತಹ ವಿಷಯಗಳನ್ನು ಬಳಸಿಕೊಂಡು ರಾಜಕಾರಣ ಮಾಡಬಾರದು. ಎಲ್ಲಾ ಪಕ್ಷಗಳು ಅತಿಕ್ರಮಣ, ಬಗರ್ ಹುಕುಂ ಇನ್ನಿತರ ಕಾಡುನಾಶದಂತಹ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ ಎನ್ನುವ ಭರವಸೆ ನೀಡಬೇಕು.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಇನ್ನಿತರೆ ಭಾಗಗಳಲ್ಲಿ ಕಾಡು, ನದಿ, ಹೊಳೆ, ಕೆರೆ ಹಾಗೂ ಜೀವವೈವಿಧ್ಯತೆಯ ರಕ್ಷಣೆಗೆ ಸಂಘಟಿತ ಧ್ವನಿ ಎತ್ತಬೇಕು ಎಂದು ಹೇಳಿದರು.
ಭಾರತೀಯ ವಿಜ್ಞಾನ ಕೇಂದ್ರದ ಪರಿಸರ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಅವರ ಶಿವಮೊಗ್ಗ ಜಿಲ್ಲೆಯ ಅರಣ್ಯ ಪರಿಸ್ಥಿತಿ ಅಧ್ಯಯನ ವರದಿಯನ್ನು ಉಪಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಬಿಡುಗಡೆ ಮಾಡಿದರು.
ತಾ.ಪಂ. ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಶಿರಸಿ ಕದಂಬ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡುಗೋಡು, ಬಿ.ಎಚ್. ರಾಘವೇಂದ್ರ, ಕೆ. ವೆಂಕಟೇಶ ಹಾಜರಿದ್ದರು.