ಶಿಕ್ಷಕರ ಸಮ್ಮೇಳನ
ಶಿವಮೊಗ್ಗ: ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಎಂದು ಗದಗ-ಬಿಜಾಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀ ಹೇಳಿದರು.
ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮ ಶನಿವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು, ದೇಶದ ಭವಿಷ್ಯ ಬದಲಿಸುವ ಸಾಮರ್ಥ್ಯ ಶಿಕ್ಷಕರಿಗಿದೆ. ಶಿಕ್ಷಕರು ಮಕ್ಕಳನ್ನು ಸಮಾಜದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವ ಮೂಲಕ ಬಲಿಷ್ಠ ದೇಶ ನಿರ್ಮಿಸಲು ಸಹಕರಿಸಬೇಕು ಎಂದರು.
ಶಿಕ್ಷಕ ನಿರ್ಮಾಣ: ದೇಶದಲ್ಲಿ ವಿಜ್ಞಾನಿ ಮತ್ತು ಎಂಜಿನಿಯರ್ಗಳು ಏನನ್ನು ಬೇಕಾದರೂ ನಿರ್ಮಾಣ ಮಾಡಬಹುದು. ಆದರೆ, ಒಬ್ಬ ಒಳ್ಳೆಯ ಶಿಕ್ಷಕನನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದ ಅವರು, ಶಿಕ್ಷಕ ಎಂದರೆ ಕೇವಲ ಶಾಲೆ, ಕಾಲೇಜುಗಳಲ್ಲಿ ಪಾಠ ಪ್ರವಚನ ಮಾಡುವವನು ಮಾತ್ರವಲ್ಲ. ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುವವನೂ ಒಬ್ಬ ಶಿಕ್ಷಕ ಎಂದರು.
ದೊಡ್ಡ ಸ್ಥಾನ: ಗುರುವಿನ ಸ್ಥಾನ ಬಹಳ ದೊಡ್ಡದು. ಈ ಸಂಬಂಧ ಮಕ್ಕಳ ಮನಸನ್ನು ಗೆಲ್ಲುವಂತಹ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದ ನಿರ್ಭಯಾನಂದ ಶ್ರೀ, ವಿದ್ಯಾದಾನ ಶ್ರೇಷ್ಠವಾದುದಾಗಿದೆ. ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಮಾನವೀಯ ಮೌಲ್ಯ ತಿಳಿಸಬೇಕು. ಸಮಾಜವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಶ್ರೀ, ಕಾರ್ಪೋರೇಟ್ ರಮೇಶ್ ಉಮ್ರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್ ಮೊದಲಾದವರು ಉಪಸ್ಥಿತರಿದ್ದರು.