ಅಡ್ಡೇರಿ ಶಾಲೆಗೆ ಶಿಕ್ಷಕರ ನೇಮಿಸಲು ಆಗ್ರಹ
ಕ.ಪ್ರ.ವಾರ್ತೆ, ಸಾಗರ, ಜೂ. 17
ತಾಲೂಕಿನ ಕೆಳಗಿನಮನೆ ಅಡ್ಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಸೋಮವಾರ ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಡ್ಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 2007ರಲ್ಲಿ ಉನ್ನತಿಕರಿಸಲಾಗಿದೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿ ನಡೆಯುತ್ತಿದ್ದು, ಕೇವಲ ಮೂರು ಜನ ಶಿಕ್ಷಕರಿದ್ದಾರೆ. 2012-13ನೇ ಸಾಲಿನಲ್ಲಿ ಮುಖ್ಯ ಶಿಕ್ಷಕ ಆರ್.ಜಿ.ಶೆಟ್ಟಿ ನಿವೃತ್ತರಾದ ಬಳಿಕ ಈತನಕ ಮುಖ್ಯಶಿಕ್ಷಕ ಹುದ್ದೆಯನ್ನು ಭರ್ತಿ ಮಾಡಿಲ್ಲ. ಇನ್ನೋರ್ವ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದ್ದಾರೆ.
ಶಾಲೆ ಮುಚ್ಚುವ ಭೀತಿ: ಒಟ್ಟು 70 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಿಕ್ಷಕರ ಕೊರತೆಯಿಂದಾಗಿ ಪಾಠಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳಿಸಲು ವರ್ಗಾವಣೆ ಪತ್ರ ಕೋರುತ್ತಿದ್ದಾರೆ.
ಇದೇ ರೀತಿ ಮುಂದುವರೆದರೆ ಶಿಕ್ಷಕರಿಲ್ಲದೆ ಶಾಲೆ ಮುಚ್ಚಿಹೋಗುವ ಸಾಧ್ಯತೆ ಇದೆ. ಶಿಕ್ಷಕರ ಕೊರತೆ ನೀಗಿಸುವಂತೆ ಹಲವಾರು ಬಾರಿ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಬೇಕು. ಶಾಲೆಯಲ್ಲಿನ ಬಿಸಿಯೂಟದ ಸಿಬ್ಬಂದಿಗಳನ್ನು ತಕ್ಷಣ ಬದಲಾಯಿಸಿ ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ್, ಸೋಮಶೇಖರ್ ಹುತ್ತದಿಂಬ, ಅಶೋಕ್ ಅಡ್ಡೇರಿ, ಹೇಮರಾಜ್, ಮೋಹನ್, ಗಂಗಾಧರ್, ಉಮೇಶ್ ಹಾಜರಿದ್ದರು.