ಜಮೀನಿಗೆ ಹೋಗಲು ಹಳ್ಳ ಅಡ್ಡ್ಡಿ
ಕ.ಪ್ರ.ವಾರ್ತೆ, ಸೊರಬ, ಜೂ.17 ತಾಲೂಕಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ವರದಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ನದಿ ಪಾತ್ರದಲ್ಲಿನ ಹೊಳೆಜೋಳದ ಗುಡ್ಡೆ ಗ್ರಾಮಸ್ಥರಿಗೆ ತಮ್ಮ ಜಮೀನಿಗೆ ತೆರಳಲು ತೊಂದರೆ ಎದುರಾಗಲಿದೆ.
ಈ ಗ್ರಾಮದವರು ತಮ್ಮ ಜಮೀನಿಗೆ ವರದಾ ನದಿಗೆ ಸೇರುವ ಹಳ್ಳವೊಂದನ್ನು ದಾಟಿ ಹೋಗಬೇಕು. ಆದರೆ ಮಳೆಗಾಲ ಹಾಗೂ ನದಿ ನೀರು ಇಳಿಯುವ ತನಕವೂ ದಾಟಲು ಕಷ್ಟಪಡಬೇಕು. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೂ ಪರ್ಯಾಯ ಮಾರ್ಗ ಒದಗಿಸಿಕೊಡಲು ಇಲ್ಲಿವರೆಗೂ ಯಾವುದೇ ಆಡಳಿತ ಮುಂದಾಗಿಲ್ಲ.
ತಮ್ಮ ಸಮಸ್ಯೆ ಕುರಿತು ಹಲವು ಬಾರಿ ನಿವೇದಿಸಿಕೊಂಡ ಬಳಿಕ ಹಿಂದಿನ ಸಾಲಿನಲ್ಲಿ ಇಲ್ಲಿ ಕಿರುಸೇತುವೆಗಾಗಿ ರು. 12 ಲಕ್ಷ ಮಂಜೂರು ಮಾಡಿಸಲಾಗಿದೆ. ಆದರೂ ಈ ಮೊತ್ತದಲ್ಲಿ ಸೇತುವೆ ನಿರ್ಮಾಣ ಸಾಧ್ಯವಿಲ್ಲ. ಹಾಗಾಗಿ ರೈತರು ತಮ್ಮ ಜಮೀನಿಗೆ 3-4 ಕಿಮೀ ಸುತ್ತು ಬಳಸಿ ತೆರಳುವ ಸಮಸ್ಯೆ ನೀಗಿಲ್ಲ.
ಕೃಷಿ ಭೂಮಿ: ಈ ಭಾಗದಲ್ಲಿ ಸಾವಿರಾರು ಎಕರೆ ಕೃಷಿಯೋಗ್ಯ ಭೂಮಿ ಇದೆ. ಕಿರುಸೇತುವೆ ಆದರೆ ಕೃಷಿಕ ಇನ್ನಷ್ಟು ಉತ್ಸಾಹದಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯ. ಇದರೊಂದಿಗೆ ವರದಾ ನದಿಗೆ ಬ್ಯಾರೇಜ್ ಆದರೆ, ಕೃಷಿಗೆ ಅಲ್ಲದೆ ಇಲ್ಲಿನ ಅನೇಕ ಹಳ್ಳಿಗಳಿಗೆ, ಸೊರಬ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲು ಸಾಧ್ಯ.
ಇಂತಹ ಪ್ರಮುಖ ಮೂಲ ಅವಶ್ಯಕತೆಗಳತ್ತ ಜನಪ್ರತಿನಿಧಿಗಳು ಗಮನಹರಿಸಿ, ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಆಹಾರೋತ್ಪನ್ನಗಳ ಪ್ರಗತಿಗೆ ಸಹಕರಿಸಬೇಕು ಎಂದು ಗ್ರಾಮದ ಹಲವರು ಶಾಸಕರಲ್ಲಿ ವಿನಂತಿಸಿದ್ದಾರೆ.
ಗ್ರಾಮದ ಈಶ್ವರಪ್ಪ, ಹೂವಪ್ಪ, ಟಿ. ಸುಬ್ರಾಯ, ಅಂಗಡಿ ಚಂದ್ರಪ್ಪ, ಸಣ್ಣಪ್ಪಮೊದಲಾದವರು ತಮ್ಮ ಸಂಕಟ ವ್ಯಕ್ತಪಡಿಸಿದ್ದಾರೆ.