ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪದೇಪದೇ ಸಂದರ್ಶನ ಬೇಡ: ಅತಿಥಿ ಉಪನ್ಯಾಸಕರ ಮನವಿ

Lingaraj Badiger
Updated On : 18 Jun 2013, 11:14 am

ಕ.ಪ್ರ.ವಾರ್ತೆ  ಸಾಗರ  ಜೂ.17 ಕಳೆದ 10-12 ವರ್ಷಗಳಿಂದ ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸರ್ಕಾರ ತನ್ನ ಹೊಸ ಆದೇಶದ ಮೂಲಕ ಕಡೆಗಣಿಸುತ್ತಿದ್ದು, ಸೇವಾ ಹಿರಿತನವನ್ನೂ   ಪರಿಗಣಿಸದೆ ಪದೇಪದೇ ಸಂದರ್ಶನ ಮಾಡುವುದನ್ನು ನಿಲ್ಲಿಸುವಂತೆ ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಸರ್ಕಾರ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆಯೇ ವಿನಃ ಅವರಿಗೆ ಜೀವನಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ  ಪ್ರಯತ್ನ ನಡೆಸಿಲ್ಲ. ತಿಂಗಳಿಗೆ ಸರಿಯಾಗಿ ಗೌರವಧನವನ್ನೂ ನೀಡುತ್ತಿಲ್ಲ ಎಂದು ದೂರಿದರು.
10,500 ಉಪನ್ಯಾಸಕರು: ರಾಜ್ಯದಲ್ಲಿ 10,500 ಅತಿಥಿ ಹಾಗೂ ಅರೆಕಾಲಿಕ ಉಪನ್ಯಾಸಕರಿದ್ದೇವೆ. ಶಿವಮೊಗ್ಗ  ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಎಲ್ಲರೂ ಮೂಲ ಸೌಕರ್ಯದಿಂದ ವಂಚಿತರಾಗಿದ್ದರೂ, ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೇವೆ ಎಂದರು.
ರಜೆ ಮಾಡಿದರೆ ಸಂಬಳ ಕಡಿತ ಮಾಡುವ ಬಗ್ಗೆ ಯೋಚಿಸುವ ಸರ್ಕಾರ ಹೆಚ್ಚುವರಿ ತರಗತಿ ತೆಗೆದುಕೊಂಡು ಪಾಠ ಪೂರ್ಣಗೊಳಿಸಿದಾಗ ನಮಗೆ ಹೆಚ್ಚು ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪದವಿ ಕಾಲೇಜುಗಳಿಗೂ ಮುಂದುವರೆಸಿ: ಸೇವಾ ಹಿರಿತನ ಪರಿಗಣಿಸಿ 2005ರಿಂದ ಈತನಕ ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನೇ ಪದವಿ ಕಾಲೇಜುಗಳ ಸೇವಾವಧಿಯಲ್ಲಿ ಮುಂದುವರೆಸಬೇಕು. ಹಿಂದಿನಿಂದಲೂ ಸೇವೆ ಸಲ್ಲಿಸಿಕೊಂಡು ಬಂದವರಿಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿ ತಿಂಗಳ ವೇತನವನ್ನು ಅದೇ ತಿಂಗಳು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಆಂಧ್ರಪ್ರದೇಶ, ಕೇರಳ, ತ್ರಿಪುರ, ಗುಜರಾತ್ ಹಾಗೂ ಪಂಜಾಬ್ ಸರ್ಕಾರಗಳು ಒಮ್ಮೆ ತೆಗೆದುಕೊಂಡ ಅತಿಥಿ ಉಪನ್ಯಾಸಕರನ್ನು ಪ್ರತಿವರ್ಷ ಸಂದಶಂನಕ್ಕೆ ಒಳಪಡಿಸುವುದಿಲ್ಲ. ಅವರನ್ನೇ ಮುಂದುವರೆಸುವ ಜೊತೆಗೆ ರು. 25,000 ವೇತನ  ನಿಗದಿಪಡಿಸಿದೆ. ರಾಜ್ಯದಲ್ಲೂ ಇದೇ ಮಾನದಂಡ ಅನುಸರಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯಾವುದೇ ಷರತ್ತಿಲ್ಲದೆ ಮುಂದುವರೆಸಬೇಕು. ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ನವೀನ್ ಸಿ., ಜಿಲ್ಲಾಧ್ಯಕ್ಷ ಬಸವರಾಜ ಕಟ್ಟಿಮನಿ, ಬೃಂದಾ ಹೆಗಡೆ, ಎಂ.ಪಿ. ಅಣ್ಣಪ್ಪ, ಎನ್.ಜಿ. ಆಶಾ ಮೊದಲಾದರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement