ನೇಮಕಾತಿ ಪ್ರಕ್ರಿಯೆ ರದ್ದು: ಅಭ್ಯರ್ಥಿಗಳ ಪರದಾಟ
ಕ.ಪ್ರ.ವಾರ್ತೆ , ಶಿವಮೊಗ್ಗ , ಜೂ.18
ರಾಜ್ಯ ಸರ್ಕಾರ ಅರಣ್ಯ ರಕ್ಷಕ ಮತ್ತು ಅರಣ್ಯ ಉಪವಲಯಾಧಿಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಿದ್ದು, ಅರಣ್ಯ ರಕ್ಷಕ ಹುದ್ದೆಯ ದೈಹಿಕ ಪರೀಕ್ಷೆಗಾಗಿ ಬಂದಿದ್ದ ಹೊರ ಜಿಲ್ಲೆಗಳ ಅಭ್ಯರ್ಥಿಗಳು ನಗರದ ನೆಹರು ಕ್ರೀಡಾಂಗಣದಲ್ಲಿ ಪರದಾಡುವಂತಾಯಿತು.
ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗದ ಮೀಸಲಾತಿಯನ್ನು ನಿರ್ಧರಿಸುವ ಸಂಬಂಧ ಈಗಾಗಲೇ ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದಿದ್ದು, ಇದೀಗ ಅರಣ್ಯ ರಕ್ಷಕ ಹಾಗೂ ಅರಣ್ಯ ಉಪವಲಯಾಧಿಕಾರಿ ಹುದ್ದೆ ನೇಮಕಾತಿಯ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲದ ಪರಿಣಾಮ ಅಭ್ಯರ್ಥಿಗಳು ಸೋಮವಾರ ತಡರಾತ್ರಿಯೇ ನಗರಕ್ಕೆ ಆಗಮಿಸಿದ್ದರು.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ನೂರಾರು ಅರಣ್ಯ ರಕ್ಷಕ ಹುದ್ದೆಗಳಿಗೆ ಕೆಲ ತಿಂಗಳ ಹಿಂದೆ ನೇಮಕಾತಿಗೆ ಚಾಲನೆ ನೀಡಿತ್ತು. ಅಲ್ಲದೆ ಒಂದು ಹುದ್ದೆಗೆ ಇಪ್ಪತ್ತರಂತೆ ಅರ್ಜಿಗಳನ್ನು ಪರಿಶೀಲಿಸಿ, ಇಂದು ದೈಹಿಕ ಪರೀಕ್ಷೆಗಾಗಿ ನೇರ ನೇಮಕಾತಿಗೆ ಬರುವಂತೆ ಅಭ್ಯರ್ಥಿಗಳಿಗೆ ಇಲಾಖೆ ಸೂಚನೆಯನ್ನು ಸಹ ನೀಡಿ, ಶಿವಮೊಗ್ಗದ ನೆಹರು ಕ್ರೀಡಾಂಗಣವನ್ನು ಪರೀಕ್ಷೆ ನಡೆಯುವ ಸ್ಥಳವಾಗಿ ಗುರುತಿಸಿತ್ತು.
ಅದರಂತೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಹೊರ ಜಿಲ್ಲೆಗಳಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ತಡರಾತ್ರಿಯೇ ನಗರಕ್ಕೆ ಆಗಮಿಸಿದ್ದರು. ಕೆಲವು ಅಭ್ಯರ್ಥಿಗಳು ಬಸ್ ನಿಲ್ದಾಣಗಳಲ್ಲಿ ಮಲಗಿದ್ದರು. ಬೆಳಿಗ್ಗೆ ದೈಹಿಕ ಪರೀಕ್ಷೆಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಅಸಮಾಧಾನ: ಬೆಳಿಗ್ಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತೀರ್ಣರಾಗಿ ಸರ್ಕಾರಿ ಕೆಲಸದ ಕನಸು ಕಂಡಿದ್ದ ಗುಲ್ಬರ್ಗ, ಬಳ್ಳಾರಿ, ಗದಗ, ಹೂವಿನಹಡಗಲಿ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ಅಭ್ಯರ್ಥಿಗಳು ಕ್ರೀಡಾಂಗಣದ ವಾತಾವರಣ ಕಂಡು ಕ್ಷಣಕಾಲ ಕಂಗಾಲಾದರು. ಕ್ರೀಡಾಂಗಣದಲ್ಲಿ ನೇಮಕಾತಿ ನಡೆಯುವ ಯಾವೊಂದು ಸೂಚನೆ ಕೂಡ ಕಾಣದಿರುವುದು, ಇಲಾಖೆ ಯಾವೊಬ್ಬ ಸಿಬ್ಬಂದಿಯೂ ಸ್ಥಳದಲ್ಲಿಲ್ಲದಿರುವುದು ಕಂಡು ಅಸಮಾಧಾನಗೊಂಡರು.
ಜಿಲ್ಲಾಧಿಕಾರಿಗೆ ಮನವಿ: ಮುಂಜಾನೆ ವಾಕಿಂಗ್ಗೆ ಬಂದ ವ್ಯಕ್ತಿಯೊಬ್ಬರು ಅಭ್ಯರ್ಥಿಗಳ ಲಗೇಜ್ಗಳನ್ನು ಕಂಡು ವಿಚಾರಿಸಿ, ಅವರ ಸಂಪರ್ಕದಲ್ಲಿರುವ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಸಂದರ್ಶನ ರದ್ದಾದ ವಿಷಯ ತಿಳಿಸಿದ್ದಾರೆ. ನಂತರ ಪತ್ರಿಕೆಯಲ್ಲಿ ಹೊರಡಿಸಿರುವ ಜಾಹೀರಾತನ್ನು ಕಂಡು ಬೇಸತ್ತ ಅಭ್ಯರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದು, ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನೇಮಕಾತಿ ರದ್ಧತಿ ಬಗ್ಗೆ ಐದು ದಿನಗಳ ಹಿಂದೆಯೇ ಸರ್ಕಾರ ಸೂಚಿಸಿದ್ದರೂ, ಇಲಾಖೆ ಅಧಿಕಾರಗಳು ರದ್ಧತಿಯ ಆದೇಶವನ್ನು ಮೊದಲೇ ಅಭ್ಯರ್ಥಿಗಳಿಗೆ ತಿಳಿಸದೇ, ಮಂಗಳವಾರ ಪತ್ರಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ, ಮುಂದೆ ಯಾವ ದಿನಾಂಕದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಎಂದು ಇಲಾಖೆ ತಿಳಿಸದಿರುವುದು ಅಭ್ಯರ್ಥಿಗಳು, ಪೋಷಕರು ಆಕ್ರೋಶಕ್ಕೆ ಕಾರಣವಾಗಿದೆ.
ಇವರೇನಂತಾರೇ?: ಅರಣ್ಯ ರಕ್ಷಕ ಹುದ್ದೆಗಾಗಿ ಅರ್ಜಿ ಹಾಕಿದ್ದು, ಮಂಗಳವಾರ ದೈಹಿಕ ಪರೀಕ್ಷೆ ಆಹ್ವಾನಿಸಿದ್ದರು. ಆದರೆ, ಇಲ್ಲಿ ನೇಮಕಾತಿ ಪ್ರಕ್ರಿಯೆಯ ಯಾವುದೇ ಲಕ್ಷಣಗಳು ಕಾಣಲಿಲ್ಲ. ಇಲ್ಲಿಗೆ ಬಂದ ನಂತರ ಪತ್ರಿಕೆಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದೂಡಲ್ಪಟ್ಟ ಮಾಹಿತಿ ಗೊತ್ತಾಯಿತು. ಅರ್ಜಿ ಹಾಕುವಾಗ ನಮ್ಮ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದರು.
ಅದರ ಮೂಲಕವಾದರೂ ವಿಷಯ ತಿಳಿಸಬಹುದಿತ್ತು. ಅದು ಕೂಡ ಮಾಡದೇ ಏಕಾಏಕಿ ನೇಮಕಾತಿ ರದ್ದು ಮಾಡಿರುವುದು, ಮುಂದಿನ ದಿನಾಂಕ ಪ್ರಕಟ ಮಾಡದಿರುವುದು ನಮಗೆ ಆತಂಕಕ್ಕೀಡು ಮಾಡಿದೆ. ಮೊದಲೇ ವಿಷಯ ತಿಳಿಸಿದಿದ್ದರೆ ನಮ್ಮ ಪ್ರಯಾಣ ದರ ನೂರಾರು ರುಪಾಯಿ ಹಣ ಉಳಿಯುತ್ತಿತ್ತು ಎಂದು ಗುಲ್ಬರ್ಗಾ ಅಭ್ಯರ್ಥಿ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.
ಆಕ್ರೋಶ: ನಾವು ದಾವಣಗೆರೆಯ ಹರಪನಹಳ್ಳಿಯಿಂದ ಬಂದಿದ್ದೆವೆ, ನಮ್ಮ ಮಗಳಿಗೆ ಅರಣ್ಯ ರಕ್ಷಕ ಹುದ್ದೆಗೆ ಇಲಾಖೆ ಮಂಗಳವಾರ ನೇರ ಸಂದರ್ಶನಕ್ಕೆ ಆಹ್ವಾನಿಸಿತು. ಇಲ್ಲಿಗೆ ಬಂದರೆ ನೇಮಕಾತಿಯ ಯಾವೊಂದು ಲಕ್ಷಣಗಳು ಕಾಣದಿರುವುದು ನಮಗೆ ಬೇಸರವಾಯಿತು. ನೇಮಕಾತಿ ಪ್ರಕ್ರಿಯೆ ರದ್ದಾದ ಮಾಹಿತಿಯನ್ನು ಮುಂಚಿತವಾಗಿ ತಿಳಿಸುವ ಎಲ್ಲಾ ಅವಕಾಶ ಇದ್ದರೂ ಇಲಾಖೆ ಉದಾಸೀನ ಮಾಡಿದ್ದು ಸರಿಯಲ್ಲ ಎಂದು ಮಹಿಳಾ ಅಭ್ಯರ್ಥಿಯ ತಾಯಿ ಶಾರದಮ್ಮ ಅಸಮಾಧಾನ ವ್ಯಕ್ತಪಡಿಸಿದರು.