ವಿಮಾ ಯೋಜನೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಜೂ.18
ಖಾಸಗಿ ಏಜೆನ್ಸಿಗಳು ಗುತ್ತಿಗೆ ಆಧಾರದಲ್ಲಿ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಕಾರ್ಮಿಕರಿಗೆ ಸಿಗಬೇಕಾದ ಭವಿಷ್ಯ ನಿಧಿ ಹಾಗೂ ಆರೋಗ್ಯ ವಿಮಾ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುತ್ತಿಗೆ ಕಾರ್ಮಿಕರನ್ನು ಒದಗಿಸುವ ನಗರದ ಸ್ಕೈಲಾರ್ಕ್ ಎಂಬ ಖಾಸಗಿ ಸಂಸ್ಥೆ, ನಗರದಲ್ಲಿರುವ ವಿವಿಧ ಪ್ರಮುಖ ಕಂಪನಿಗಳಲ್ಲಿ ತನ್ನ ಕಾರ್ಮಿಕರನ್ನು ನಿಯೋಜನೆ ಮಾಡಿದ್ದು, ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮಾ ಯೋಜನೆಗಳನ್ನು ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ಬೆದರಿಕೆ: ಕಾರ್ಮಿಕರು ಆ ಬಗ್ಗೆ ಪ್ರಶ್ನಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಾರೆ. ಅಂತಹ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನೂ ಜಾರಿಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಖಾಸಗಿ ಸಂಸ್ಥೆಗಳನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾಗಕಿರಣ್ ಶೆಟ್ಟಿ, ಕೇಬಲ್ ರಾಘವೇಂದ್ರ ಹೆಬ್ಬಾಳ್, ಎಸ್.ಬಿ. ಶಿವಕುಮಾರ್, ವಿಜಯಕುಮಾರ್ ಮೊದಲಾದದವರು ಇದ್ದರು.