ಪರ್ಯಾಯ ವ್ಯವಸ್ಥೆಗೆ ಆಗ್ರಹ
ಶಿವಮೊಗ್ಗ: ಸಾರಾಯಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಸಾರಾಯಿ ಮರಾಟಗಾರರ ಸಂಘ ಸರ್ಕಾರನ್ನು ಒತ್ತಾಯಿಸಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಸಾರಾಯಿ ಮಾರಾಟ ನಿಷೇಧ ಮಾಡಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್ ಮಾರಾಟಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ತಿಳಿಸಿತ್ತು. ಆದರೆ, ಇದುವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಸಂಘ ಆರೋಪಿಸಿದೆ. ಮುಂದಿನ ದಿನಗಳಲ್ಲಿ ಸಾರಾಯಿ ಮಾರಾಟ ನಿಷೇಧವನ್ನು ವಾಪಸ್ಸು ಪಡೆಯಬೇಕು. ಕಡಿಮೆ ದರದ ಮದ್ಯ ನೀಡಲು ತೀರ್ಮಾನ ಕೈಗೊಂಡಿರುವ ಸರ್ಕಾರ ದೇಶಿಯ ಮದ್ಯ ಮಾರಾಟಕ್ಕೆ ಹಿಂದೆ ಸಾರಾಯಿ ಮಾರಾಟ ಮಾಡುತ್ತಿದ್ದ ಮಂದಿಗೇ ಪರವಾನಿಗೆ ನೀಡಬೇಕು ಎಂದು ಸಂಘ ಒತ್ತಾಯಿಸಿದೆ. ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಸಾರಾಯಿ ಮಾರಾಟಗಾರರಿಗೆ ರಾಜ್ಯ ಸರ್ಕಾರದ ಜಾಮೀನಿನ ಆಧಾರದಲ್ಲಿ ಐದು ಲಕ್ಷ ರುಪಾಯಿ ವರೆಗೆ ಬ್ಯಾಂಕ್‌ಗಳಿಂದ(ಶೇಕಡ 30ರಷ್ಟು)ಸಾಲ ಮಂಜೂರು ಮಾಡಬೇಕು ಅಥವಾ ಸಾರಾಯಿ ಮಾರಾಟಗಾರರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಸ್.ಎಲ್. ಲಕ್ಕಪ್ಪ ಒತ್ತಾಯಿಸಿದ್ದಾರೆ.
ಲಾರಿ ಉರುಳಿ ಚಾಲಕ ಸಾವು
ಶಿವಮೊಗ್ಗ: ವೇಗವಾಗಿ ಬಂದ ಲಾರಿ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಹೊರವಲಯದ ಚೋರಡಿ ಬಳಿ ಬುಧವಾರ ನಡೆದಿದೆ. ರಾಮು(27) ಮೃತ ಯುವಕ. ಕ್ಲೀನರ್ ಮಹೇಶ್ (27) ಗಾಯಗೊಂಡವರು. ಗೋವಾದಿಂದ ಬೆಂಗಳೂರಿಗೆ ಪೈಂಟ್ ಬಾಕ್ಸ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದು, ಅತೀ ವೇಗವಾಗಿ ಬಂದ ಲಾರಿ ಚಾಲಕ ಚೋರಡಿ ಹಂಪ್ಸ್ ಬಳಿ ನಿಧಾನವಾಗಿ ಚಲಿಸದೆ ವೇಗವಾಗಿ ಬಂದಿದ್ದರಿಂದ ಲಾರಿ ಉರುಳಿ ಬಿದ್ದಿದೆ. ರಾಮು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹೇಶ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.