ಆಧಾರ್ ಕಾರ್ಡ್ : ನಿರ್ಲಕ್ಷ್ಯ ಬೇಡ
ಕ.ಪ್ರ.ವಾರ್ತೆ ಶಿಕಾರಿಪುರ ಜೂ.20
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ಎಲ್ಲರೂ ಅರ್ಹರಾಗಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಪಡೆದು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ರಾಘವೇಂದ್ರ ಹೇಳಿದರು.
ಗುರುವಾರ ಪಟ್ಟಣದ ಆಡಳಿತ ಸೌಧದಲ್ಲಿ ನೂತನವಾಗಿ ಆರಂಭವಾದ ಆಧಾರ್ ಕಾರ್ಡ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಅಂಚೆ ಇಲಾಖೆ ಹಾಗೂ ಪುರಸಭೆಯಲ್ಲಿ ಆಧಾರ್ ಕಾರ್ಡ್ಗಳನ್ನು ಸಾರ್ವಜನಿಕರಿಗೆ ವಿತರಿಸುವ ಕೇಂದ್ರ ಆರಂಭವಾಗಿದ್ದು, ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಪಟ್ಟಣಕ್ಕೆ ಇನ್ನೂ ಹೆಚ್ಚಿನ ಕೇಂದ್ರದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಆದಾಯ, ಜಾತಿ ಮತ್ತಿತರ ಸ್ಥಿತಿಗತಿಯ ಆಧಾರದಲ್ಲಿ ಯೋಜನೆ ರೂಪಿಸುತ್ತಿದ್ದು, ಅರ್ಹರು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಲು ಆಧಾರ್ ಕಾರ್ಡ್ ಅನಿವಾರ್ಯವಾಗಲಿದೆ ಎಂದರು.
ತೇಜಸ್ವಿನಿ ರಾಘವೇಂದ್ರ, ಆಧಾರ್ ಕಾರ್ಡ್ ತಾಲೂಕು ಸಂಯೋಜಕ ಕೆ.ಬಿ ಪ್ರಕಾಶ್, ರೇಣುಕಪ್ಪ,ಪ್ರವೀಣ್ ಶೆಟ್ಟಿ ಮಾರವಳ್ಳಿ ಉಮೇಶ್ ಮೊದಲಾದವರು ಇದ್ದರು.