ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶುದ್ಧ ಹಸ್ತದೊಂದಿಗೆ ಕ್ರಿಯಾಶೀಲರಾಗಿ

Lingaraj Badiger
Updated On : 21 Jun 2013, 10:53 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ.20 ವ್ಯವಸ್ಥೆ ಸರಿಪಡಿಸಬೇಕೆಂದರೆ ಎರಡೂ ಕೈ ಚಪ್ಪಾಳೆ ತಟ್ಟಬೇಕು. ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಬರಬೇಕಾದರೆ ಜನಪ್ರತಿನಿಧಿಗಳು ಹಾಗೂ ನೌಕರ ವರ್ಗ ಶುದ್ಧ ಹಸ್ತದಿಂದ ಹಾಗೂ ಬದ್ಧತೆಯಿಂದ ಕ್ರೀಯಾಶೀಲರಾಗಿ ಕೆಲಸ ಮಾಡಬೇಕಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗದಲ್ಲಿ ರು. 250 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿದ ಅವರು, ಕೆಲಸಗಳು ಸಮರ್ಪಕವಾಗಿ ಆಗಬೇಕೆಂದರೆ ಖಾಲಿ ಇರುವ ಹುದ್ದೆ ಭರ್ತಿಯಾಗಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ವಿಧಾನಸಭೆ ಕಲಾಪದ ವೇಳೆ ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲು ಅವಕಾಶ ಕೊಡುತ್ತೇನೆ ಎಂದರು.
ಸರ್ಕಾರದ ಜವಾಬ್ದಾರಿ: ನೌಕರ ವರ್ಗಕ್ಕೆ ಸೌಲಭ್ಯ ಕಲ್ಪಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಪಂಚಾಯ್ತಿ ಮಟ್ಟದಲ್ಲಿ ಇನ್ನೂ ಸಾಕಷ್ಟು ನೌಕರರಿಗೆ ವಸತಿಗೃಹ ನಿರ್ಮಿಸಿಕೊಡಬೇಕು ಎಂದ ಅವರು, ಇರುವ ಸೌಲಭ್ಯ ಬಳಸಿಕೊಂಡು  ನೀತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಸರ್ಕಾರಿ ನೌಕರರು ನೊಗ ಹೊತ್ತ ಎತ್ತು ಇದ್ದಂತೆ. ನೌಕರರ ಮೇಲೆ ಬಹಳ ಜವಾಬ್ದಾರಿಗಳಿದ್ದು, ಸಮರ್ಪಕವಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಜನರ ನಿರೀಕ್ಷೆ ಆಕಾಶದಷ್ಟಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ಎರಡರ ಮೇಲೂ ಇದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗಾದರೂ ಜನರ ನಿರೀಕ್ಷೆಗೆ ತಕ್ಕಂತೆ ಶುದ್ಧ ಹಸ್ತದಿಂದ ಹಾಗೂ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಮಾಜದ ನಿಜವಾದ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದರು.
ಪ್ರಾಮಾಣಿಕ ಕೆಲಸ: ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ತಲುಪಿಸುವ ಹೊಣೆ ಕೂಡ ನೌಕರರದ್ದಾಗಿದ್ದು, ಈ ವಿಷಯದಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕಿದೆ ಎಂದರು.
ಭೋಜನ ಶಾಲೆ ಉದ್ಘಾಟಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಿಮ್ಮನೆ ರತ್ನಾಕರ್, ಖಾಸಗೀಕರಣ ಇಡೀ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಖಾಸಗೀಕರಣದಿಂದ ಕೇವಲ ವ್ಯಕ್ತಿ ಶ್ರೀಮಂತನಾಗುತ್ತಾನೆ ಆದರೆ ದೇಶ ಬಡವಾಗುತ್ತದೆ. ಈ ವಿಷಯದಲ್ಲಿ ನಾವು ವಿಫಲರಾಗಿದ್ದೇವೆ ಎಂದರು.
ಗುತ್ತಿಗೆ ನೀಡಿಲ್ಲ: ದೇಶದ ಅಭಿವೃದ್ಧಿಗೆ ಕೇವಲ ಜನಪ್ರತಿನಿಧಿಗಳಿಗೆ ಗುತ್ತಿಗೆ ನೀಡಿಲ್ಲ. ಇದರಲ್ಲಿ ಪ್ರತಿಯೊಬ್ಬ  ನಾಗರಿಕರ ಪಾತ್ರ ಇರಬೇಕು. ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕು. ಇದು ಸಂವಿಧಾನಿಕ ಹಕ್ಕು. ಇಂತಹ ನ್ಯಾಯಯುತ ಹೋರಾಟಕ್ಕೆ ತಮ್ಮ ಬೆಂಬಲವಿರುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಎನ್. ರಘುರಾಮ ದೇವಾಡಿಗ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸದ ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ಕೆ.ಎಸ್.ಡಿ.ಸಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಬಿಜ್ಜೂರಿ,  ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮೊದಲಾದವರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement