ಅಡಕೆ ಬೆಳೆಗಾರರ ಸಾಲ ಮನ್ನಾ ಅಸಾಧ್ಯ
ಬೆಂಗಳೂರು: ಗೋರಕ್ಸಿಂಗ್ ವರದಿಯ ಶಿಫಾರಸಿನ ಅನುಸಾರ ಅಡಕೆ ಬೆಳೆಗಾರರ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಆದರೆ, 10 ಎಕರೆಗೂ ಕಡಿಮೆ ಜಮೀನು ಹೊಂದಿರುವ ಬೆಳೆಗಾರರ ಸಾಲ ಮನ್ನಾ ಮಾಡುವ ಶಿಫಾರಸನ್ನು ಜಾರಿಗೆ ತರಲಾಗದು ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಮತ್ತೊಮ್ಮೆ
ಸ್ಪಷ್ಟಪಡಿಸಿದೆ.
ಇದನ್ನು ಪರಿಗಣಿಸಿರುವ ನ್ಯಾ.ಎನ್.ಕುಮಾರ್ ಹಾಗೂ ನ್ಯಾ. ಸೂರಿ ಅಪ್ಪಾರಾವ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ವರದಿಯ ಕೆಲ ಶಿಫಾರಸುಗಳನ್ನು ಈಗಾಗಲೇ ಜಾರಿಗೆ ತಂದಿರುವುದರಿಂದ ನ್ಯಾಯಾಂಗ ನಿಂದನೆ ಅರ್ಜಿ ಮಾನ್ಯತೆ ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸಾಲ ಮನ್ನಾ ಕುರಿತು ಮುಖ್ಯ ನ್ಯಾಯಮೂರ್ತಿಗಳ ಪೀಠ ನೀಡಿರುವ ಆದೇಶದ ಪಾಲನೆ ಕುರಿತು ಅಗತ್ಯವಿದ್ದಲ್ಲಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸಲಹೆ ನೀಡಿರುವ ಪೀಠ, ಪ್ರಕರಣವನ್ನು ಇತ್ಯರ್ಥಗೊಳಿಸಿದೆ.
ಸುಸ್ತಿ ಬಡ್ಡಿ ಮನ್ನಾ: ಇಲ್ಲಿಯವರೆಗೆ ಅಡಕೆ ಬೆಳೆಗಾರರ ರು. 3.35 ಕೋಟಿಯಷ್ಟು ಸುಸ್ತಿಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಅಲ್ಲದೆ, ರು. 144.23 ಕೋಟಿಯಷ್ಟು ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಲಾಗಿದೆ. ಆದರೆ, 10 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಬೆಳೆಗಾರರ ಸಾಲಮನ್ನಾ ಪ್ರಸ್ತಾವನೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತು.
ವಿವಾದವೇನು?: ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಅಡಕೆ ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿರುವುದರಿಂದ ಬೆಳೆಗಾರರು ತೀವ್ರ ನಷ್ಟ ಎದುರಿಸುತ್ತಿದ್ದಾರೆ. ಸಾಲಭಾದೆ ತಾಳಲಾರದೆ ರೈತರು ಸಾವಿನತ್ತ ಮುಖ ಮಾಡುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ 10 ಎಕರೆಗೂ ಕಡಿಮೆ ಜಮೀನು ಹೊಂದಿರುವ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಗೋರಕ್ಸಿಂಗ್ ಸಮಿತಿ ವರದಿ ನೀಡಿತ್ತು.
ಆದರೆ, ಇಲ್ಲಿಯವರೆಗೆ ಅದನ್ನು ಪಾಲಿಸಿಲ್ಲ ಎಂದು ಆಕ್ಷೇಪಿಸಿ ಸಚಿನ್ ಮೀಗಾ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ, ಮೂರು ತಿಂಗಳಲ್ಲಿ ವರದಿಯ ಶಿಫಾರಸುಗಳನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು.