ಕುಂಠಿತಗೊಂಡ ಕಾಮಗಾರಿ ಪೂರ್ಣಗೊಳಿಸಲು ಮನವಿ
ಶಿವಮೊಗ್ಗ: ವಿದ್ಯಾನಗರ ಮುಖ್ಯರಸ್ತೆ ಮತ್ತು ಎನ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದ್ದು, ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರನ್ನು ಭೇಟಿಯಾದ ಒಕ್ಕೂಟದ ನಿಯೋಗ ರಸ್ತೆ ಕಾಮಗಾರಿ ಕುಂಠಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಕಾಮಗಾರಿ ಕುಂಠಿತ: ವಿದ್ಯಾನಗರ ಮುಖ್ಯರಸ್ತೆ ಮತ್ತು ಎನ್ಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿದ್ದು, ಹಲವು ದಿನಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಕಂಬಗಳ ಸ್ಥಳಾಂತರ ಆಗಿಲ್ಲ: ಕಾಮಗಾರಿ ಕುಂಠಿತಗೊಂಡಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ, ವಿದ್ಯಾನಗರ ಮುಖ್ಯರಸ್ತೆಯ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಜವಾಬ್ದಾರಿ ಮೆಸ್ಕಾಂ ಇಲಾಖೆಯದ್ದಾಗಿದೆ, ಇದಕ್ಕಾಗಿ ಅಗತ್ಯ ಹಣವನ್ನು ಇಲಾಖೆಗೆ ನೀಡಿದರೂ ಯಾವುದೇ ರೀತಿಯಲ್ಲಿ ಪ್ರಕ್ರಿಯೆ ನಡೆಸುತ್ತಿಲ್ಲ ಎಂದು ವಿವರಣೆ ನೀಡುತ್ತಾರೆ.
ಸಮನ್ವಯ ಕೊರತೆ: ಹಾಗೆಯೇ ಎನ್ಟಿ ರಸ್ತೆಯ 2 ಬದಿಯಲ್ಲಿರುವ ವಿದ್ಯುತ್ ಕಂಬಗಳು ಸ್ಥಳಾಂತರವಾಗಬೇಕಾಗಿದ್ದು, ಅಲ್ಲಿಯವರೆಗೂ ಒಳಚರಂಡಿ ಕಾಮಗಾರಿ ನಡೆಸಲು ಸಾಧ್ಯವಿಲ್ಲದಂತಾಗಿದೆ. ಇಲ್ಲೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಜವಾಬ್ದಾರಿ ಮೆಸ್ಕಾಂ ಇಲಾಖೆಯದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ. ಈ ಎರಡು ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಒಕ್ಕೂಟದ ಸದಸ್ಯರು ವಿವರಿಸಿದರು.
ಈ ಎರಡೂ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳ್ಳಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಎರಡೂ ಇಲಾಖೆಯವರೊಂದಿಗೆ ಸಭೆ ನಡೆಸಿ, ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಒಕ್ಕೂಟದ ಪ್ರಮುಖರು ಜಿಲ್ಲಾಧಿಕಾರಿಯವರನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಕೆ.ವಿ. ವಸಂತಕುಮಾರ್, ಅಶೋಕ್ ಯಾದವ್, ಜಿ.ಪಿ. ಚಂದ್ರಶೇಖರಪ್ಪ, ಮಹ್ಮದ್ ಇಕ್ಬಾಲ್, ಜನಮೇಜಿರಾವ್ ಮತ್ತಿತರರು ಇದ್ದರು.