ಸ್ನಾತಕೋತ್ತರಕ್ಕಿನ್ನು ಡಾಟಾಬೇಸ್
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.21
ಕುವೆಂಪು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳ ಡಾಟಾಬೇಸ್ ಸಿದ್ಧಪಡಿಸಲು ಮುಂದಾಗಿದೆ. ಕಳೆದ ಸಾಲಿನಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿದ್ದ ಈ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಅಳವಡಿಸಲು ತೀರ್ಮಾನಿಸಿದೆ.
ಶುಕ್ರವಾರ ಕುವೆಂಪು ವಿವಿಯಲ್ಲಿ ಕುಲಪತಿ ಪ್ರೊ. ಎಸ್.ಎ. ಬಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಜ್ಞಾನ ಸಹ್ಯಾದ್ರಿ ಹಾಗೂ ಕಡೂರು ಸ್ನಾತಕೋತ್ತರ ಕೇಂದ್ರದ ಅಧ್ಯಯನ ವಿಭಾಗಗಳಿಗೆ 2012-13ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಹೆಸರು, ಪ್ರವೇಶ ಪಡೆದ ವಿಭಾಗ, ಭಾವಚಿತ್ರ, ಜನ್ಮದಿನಾಂಕ, ನೋಂದಣಿ ಸಂಖ್ಯೆ, ಧರ್ಮ, ಲಿಂಗ, ಜಾತಿ, ಆರೋಗ್ಯ, ಈ ಹಿಂದೆ ನೋಂದಣಿ ಮಾಡಿದ ಕಾಲೇಜು ಪದವಿ, ಅಂಚೆ ವಿಳಾಸ, ಖಾಯಂ ವಿಳಾಸ, ಪೋಷಕರ ಉದ್ಯೋಗ ಇತ್ಯಾದಿ ವಿವರಗಳ ಡಾಟಾಬೇಸ್ ತಯಾರಿಸಲಾಗಿತ್ತು.
ವಿವಿ ಕಚೇರಿಯಲ್ಲಿ ಕಾಗದರಹಿತ ವ್ಯವಹಾರಗಳನ್ನು ಕಾರ್ಯರೂಪಕ್ಕೆ ತರಬೇಕಾಗಿರುವುದರಿಂದ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ವಿವಿಯ ಎಲ್ಲಾ ಆಡಳಿತ ವಿಭಾಗಗಳು ಬಳಸಲು ಅನುಕೂಲವಾಗುವಂತೆ ಪ್ರತಿ ಅಧ್ಯಯನ ವಿಭಾಗದಿಂದ ಡಾಟಾ ಅಪ್ಲೋಡ್ ಮಾಡುವ ಕಾರ್ಯಕ್ಕೆ ಶಿಕ್ಷಣ ಮಂಡಳಿ ಸಭೆಯು ಅನುಮೋದನೆ ನೀಡಿದೆ.
ದಾಖಲೆಗಳ ಸ್ಕ್ಯಾನ್: ವಿದ್ಯಾರ್ಥಿಗಳ ಡಾಟಾಬೇಸ್ನಂತೆ ವಿಶ್ವವಿದ್ಯಾಲಯದ ಎಲ್ಲಾ ಮುಖ್ಯ ದಾಖಲೆಗಳ ಸ್ಕ್ಯಾನ್ ಮಾಡಿ ಸಂಬಂಧಪಟ್ಟವರಿಗೆ ಲಭ್ಯವಾಗುವಂತೆ ಮಾಡುವ ಕಾರ್ಯಕ್ಕೆ ಶಿಕ್ಷಣ ಮಂಡಳಿ ಅನುಮೋದನೆ ನೀಡಿದೆ.
ಸುತ್ತೋಲೆ, ಅಧಿಸೂಚನೆ, ಕಚೇರಿ ಆದೇಶ, ಸಭಾ ನಡವಳಿಕೆಗಳನ್ನು ಸ್ಕ್ಯಾನ್ ಮಾಡಿ ಗ್ರೀನ್ ಸ್ಟೋನ್ ರಿಪೋಸಿಟರಿ ಸಾಫ್ಟ್ವೇರ್ ಬಳಸಿ ವಿಭಾಗ, ದಿನಾಂಕ, ರವಾನೆ ಸಂಖ್ಯೆ ವಿಷಯವಾರು ಸಂಗ್ರಹಿಸಿಡಲು ವಿವಿ ನಿರ್ಧರಿಸಿದೆ. ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮಕ್ಕಾಗಿ ವಿಜ್ಞಾನಿಗಳು, ಶಿಕ್ಷಣ ತಜ್ಞರು, ವಿಜ್ಞಾನ ಸಂಸ್ಥೆಗಳ ವಿವರಗಳುಳ್ಳ ಕೈಪಿಡಿ ತಯಾರಿಸುತ್ತಿರುವುದನ್ನೂ ಸಭೆಯ ಗಮನಕ್ಕೆ ತರಲಾಯಿತು.
ಫೀಡ್ ಬ್ಯಾಕ್: ಅಧ್ಯಾಪಕರ ಕಾರ್ಯನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳ ಫೀಡ್ಬ್ಯಾಕ್ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ವಿದ್ಯಾರ್ಥಿಗಳ ಫೀಡ್ಬ್ಯಾಕ್ ಪಡೆಯುವುದು ಏಕೆ ಎಂದು ಮಂಡಳಿಯ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ. ಬಾರಿ, ಫೀಡ್ಬ್ಯಾಕ್ ಕುಲಪತಿಗಳಿಗೆ ಮಾತ್ರ ಸಿಗುತ್ತದೆ. ಇದರಿಂದ ಅಧ್ಯಾಪಕರ ಬೋಧನಾ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಈ ಫೀಡ್ಬ್ಯಾಕ್ ಅಧ್ಯಾಪಕರ ಗ್ರೇಡಿಂಗ್ ನಿರ್ಧರಿಸುವುದಕ್ಕೆ ಅಲ್ಲ ಎಂದರು. ಸಭೆಯಲ್ಲಿ ಕುಲಸಚಿವ ಡಾ. ರಾಮೇಗೌಡ ಇದ್ದರು.
ಇನ್ನೋವೇಷನ್ ಕ್ಲಬ್: ಸಂಶೋಧನೆಗೆ ಒತ್ತು ನೀಡುತ್ತಿರುವ ಕುವೆಂಪು ವಿವಿಯು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇನ್ಕ್ಯುಬೇಷನ್ ಸೆಂಟರ್ ಫಾರ್ ರಿಸರ್ಚ್ ಅಂಡ್ ಇನ್ನೋವೇಷನ್ ಆರಂಭಿಸಲಿದೆ.
ಶುಕ್ರವಾರ ಜ್ಞಾನ ಸಹ್ಯಾದ್ರಿಯಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ. ಎಸ್.ಎ. ಬಾರಿ, ಎಲ್ಲಾ ಕಾಲೇಜುಗಳಲ್ಲಿಯೂ ಸಹ ಇನ್ನೋವೇಷನ್ ಕ್ಲಬ್ ಆರಂಭಿಸಲು ಸೂಚನೆ ನೀಡಲಾಗಿದೆ. ಕಾಲೇಜುಗಳು ಕುವೆಂಪು ವಿವಿ ಅಫಿಲಿಯೇಷನ್ ಪಡೆಯುವ ಸಂದರ್ಭದಲ್ಲಿ ಈ ರೀತಿಯ ಕ್ಲಬ್ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಒಬ್ಬ ಅಧ್ಯಾಪಕರು ವರ್ಷದಲ್ಲಿ ಕನಿಷ್ಠ ಒಂದು ಸಂಶೋಧನೆ ಮಾಡುವ ಬಗ್ಗೆ ಪ್ರಸ್ತಾವ ಕಳಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸಂಶೋಧನೆಯು ಎರಡು ವರ್ಷದ ಅವಧಿಯದ್ದಾದರೂ ಪರವಾಗಿಲ್ಲ ಎಂದು ಹೇಳಿದರು.
ತರಗತಿ ಆರಂಭ: ಪದವಿ ತರಗತಿಗಳು ಜೂನ್ 24ರಿಂದ ಆರಂಭವಾಗಲಿದ್ದು, ಸ್ನಾತಕೋತ್ತರ ಪದವಿ ತರಗತಿಗಳು ಆಗಸ್ಟ್ 1ರಿಂದ ಶುರುವಾಗಲಿವೆ ಎಂದು ಪ್ರೊ. ಬಾರಿ ಹೇಳಿದ್ದಾರೆ.
ಪರೀಕ್ಷಾ ಪದ್ಧತಿಯ ಲೋಪವನ್ನು ಗುರುತಿಸಲಾಗಿದ್ದು, ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಆನ್ಲೈನ್ನಲ್ಲಿ ಫಲಿತಾಂಶ, ಆನ್ಲೈನ್ ಡೀಕೋಡಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಜೂನ್ 27ರಂದು ಮೌಲ್ಯಮಾಪನ ಮುಗಿಯಲಿದ್ದು, ಮುಂದಿನ ಮೂರು ದಿನದಲ್ಲಿ ಫಲಿತಾಂಶ ಘೋಷಿಸಲಾಗುವುದು. ಈ ಬಾರಿ ಮೌಲ್ಯಮಾಪನ 15-20 ದಿನಗಳಲ್ಲಿ ಮುಗಿದಿದೆ ಎಂದು ತಿಳಿಸಿದರು.
ಫಲಿತಾಂಶ ಘೋಷಣೆ ಕುರಿತಂತೆ ಕಳೆದ ಬಾರಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಪದ್ಧತಿಯನ್ನು ಈ ಬಾರಿ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯಿಸಲಾಗಿದ್ದು, ಆನ್ಲೈನ್ ಮಾತ್ರವಲ್ಲದೇ ಎಸ್ಎಂಎಸ್ ಮೂಲಕ ಫಲಿತಾಂಶ ತಿಳಿಸಲಾಗುವುದು ಎಂದರು.