ಅಲೆಮಾರಿ ಕಾಲೋನಿಗಳಿಗೆ ಆರೊಗ್ಯ ಕೇಂದ್ರಕ್ಕೆ ಆಗ್ರಹ
ಶಿವಮೊಗ್ಗ: ಅಲೆಮಾರಿ ಟೆಂಟ್ ಕಾಲೋನಿಗಳಿಗೆ ಆರೊಗ್ಯ ಕೇಂದ್ರ ತೆರೆಯುವಂತೆ ರಾಜ್ಯ ಅಲೆಮಾರಿ, ಅರೆ-ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ. ಆರೋಗ್ಯ ಸಚಿವರನ್ನು ಭೇಟಿಯಾದ ಒಕ್ಕೂಟದ ನಿಯೋಗ ಆರೋಗ್ಯ ಕೇಂದ್ರದ ಅಗತ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಿತು. ಸ್ವಾತಂತ್ರ್ಯ ಲಭಿಸಿ ಆರು ದಶಕ ಕಳೆದರೂ ಅಲೆಮಾರಿಗಳ ಪಾಲಿಗೆ ಸಾಮಾಜಿಕ ನ್ಯಾಯವೆಂಬುದು ಗಗನಕುಸುಮವಾಗಿ ಉಳಿದಿದೆ. ಯಾವುದೇ ಮೂಲ ಸೌಕರ್ಯವಿಲ್ಲದೆ ಪಶುಪ್ರಾಣಿಗಳಂತೆ ಜೀವನ ನಡೆಸುತ್ತಿರುವುದು ನಾಚಿಕೆ ಪಡಬೇಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಲೆಮಾರಿಗಳ ಆರೋಗ್ಯದ ಹಿತದೃಷ್ಟಿಯಿಂದ ಈಗಾಗಲೇ ಡೆಂಘೀ, ಕಾಲರಾ, ಮಲೇರಿಯಾ ಇತರ ಹಾನಿಕರ ಮಹಾಮಾರಿ ಕಾಯಿಲೆಗಳು ಸಂಭವಿಸುತ್ತಿದೆ. ಹಾಗಾಗಿ ಸರ್ಕಾರ ಅಲೆಮಾರಿಗಳಿಗೆ ಶಾಶ್ವತ ವಸತಿ, ಶಿಕ್ಷಣ ಇತರ ಅಗತ್ಯ ಮೂಲ ಸೌಕರ್ಯ ದೊರಕುವವರೆಗೆ ಆರೋಗ್ಯ ಕೇಂದ್ರ ತೆರೆದು ಪರಿಣಾಕಾರಿಯಾಗಿ ಕಾರ್ಯಗತಗೊಳ್ಳಲು ಒತ್ತಾಯಿಸಲಾಗಿದೆ. ಒಂದು ವೇಳೆ ಯೋಜನೆ ಅಧಿಕಾರಿಗಳು ನಿರ್ಲಕ್ಷ್ಯಮಾಡಿದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.