ಇನ್ನು ಮುಂದೆ ಕಸ ಸಂಗ್ರಹಕರಿಗೆ ಹಣ ನೀಡಬೇಕಿಲ್ಲ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ. 22
ಇನ್ನು ಮುಂದೆ ನಿಮ್ಮ ಮನೆಗೆ ಕಸ ಸಂಗ್ರಹಿಸಲೆಂದು ಬರುವ ಗಂಟೆ ಗಾಡಿಯವರಿಗೆ ಹಣ ನೀಡಬೇಕಿಲ್ಲ. ನಗರಸಭೆಯೇ ಅವರಿಗೆ ಹಣ ನೀಡುತ್ತದೆ. ಜತೆಗೆ ನಗರದಲ್ಲಿರುವ ಎಲ್ಲಾ ಮನೆಗಳಿಂದಲೂ ಕಸ ಸಂಗ್ರಹಿಸಲು ನಗರಸಭೆ ಉದ್ದೇಶಿಸಿದೆ.
ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಗೆ ಕೈಗೊಂಡಿರುವ ನೂತನ ಮಧ್ಯಂತರ ಯೋಜನೆ ಬಗ್ಗೆ ವಿವರ ನೀಡಿದರು.
ಕಸ ಕರ: ನಗರವನ್ನು ಸ್ವಚ್ಚವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಈ ಹಿಂದೆ ಕಸ ಸಂಗ್ರಹಕರಿಗೆ ನೀಡಲಾಗುತ್ತಿದ್ದ 30ರಿಂದ 50 ರು. ಶುಲ್ಕವನ್ನು ನೀಡುವ ಅಗತ್ಯವಿಲ್ಲ. ಪ್ರತಿದಿನ ತಮ್ಮ ಮನೆಯ ಕಸವನ್ನಷ್ಟೆ ಕೊಟ್ಟರೆ ಸಾಕು. ಕಸ ಸಂಗ್ರಹಕರಿಗೆ ನಗರಸಭೆಯಿಂದ ಹಣ ನೀಡಲಾಗುವುದು. ನಾಗರಿಕರು ತಮ್ಮ ಆಸ್ತಿತೆರಿಗೆಯೊಂದಿಗೆ ಕಸಕರವನ್ನು ನೀಡುವ ಯೋಜನೆ ಈಗಾಗಲೇ ಜಾರಿಯಲ್ಲಿದೆ ಎಂದರು.
ಪುರಸಭಾ ಘನತ್ಯಾಜ್ಯ ನಿರ್ವಹಣಾ ರಾಜ್ಯ ನೀತಿಯಂತೆ ಪ್ರತಿ ಮನೆಗಳಿಂದ ಪ್ರಾಥಮಿಕ ಕಸ ಸಂಗ್ರಹಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಈಗಾಗಲೇ ಕರವನ್ನು ನಿಗದಿಪಡಿಸಿದ್ದು ಏಪ್ರಿಲ್ 1ರಿಂದ ಜಾರಿಯಾಗುವಂತೆ ನಾಗರಿಕ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ವಸೂಲಿ ಮಾಡುತ್ತಿದೆ ಎಂದರು.
95 ಮಂದಿ ಸಿಬ್ಬಂದಿ: ಈ ಹಿಂದಿನ ವ್ಯವಸ್ಥೆಗೆ ಬದಲಾಗಿ ಈಗ ಪ್ರತಿದಿನವೂ ನಗರದ 35 ವಾರ್ಡ್ಗಳಲ್ಲಿ 41 ಪ್ಯಾಕೇಜ್ನಲ್ಲಿ ಕಸ ಸಂಗ್ರಹಣೆ ಮಾಡಲಾಗುವುದು. ಮೊದಲ ಹಂತದಲ್ಲಿ 188 ಬಡಾವಣೆ ಹಾಗೂ ಪ್ರದೇಶಗಳಲ್ಲಿ ಪ್ರಾರಂಭಿಸಲಾಗಿದ್ದು, 65 ಗಂಟೆ ಗಾಡಿಗಳು, 19 ಆಟೋಗಳ ಮೂಲಕ 34 ಸಾವಿರ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಗಳಿಂದ ಕಸ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ 95 ಕಸ ಸಂಗ್ರಹಕರಿಗೆ ನಿಯೋಜಿಸಿಕೊಳ್ಳಲಾಗಿದೆ ಎಂದರು.
ನಾಗರಿಕರು ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಸವನ್ನು ತಮ್ಮ ಮನೆ ಬಾಗಿಲಿಗೆ ಬರುವ ಗಾಡಿಗಳಲ್ಲಿ ಹಾಕಬೇಕು. ಇಲ್ಲವೆ ಗಾಡಿಗಳು ತೆಗೆದುಕೊಂಡು ಹೋಗುವ ರೀತಿಯಲ್ಲಿ ಮನೆ ಬಾಗಿಲಿನಲ್ಲಿ ಸುರಕ್ಷಿತವಾಗಿಡಬೇಕು. ಕಸ ಸಂಗ್ರಹ ಮಾಡುವವರಿಗೆ ಹಣ ನೀಡಬಾರದು ಎಂದು ಅವರು ಮನವಿ ಮಾಡಿದರು.
ದೃಢೀಕರಣ: ಕಸ ಸಂಗ್ರಹಣೆ ತೃಪ್ತಿದಾಯಕ ಎಂಬ ಬಗ್ಗೆ ಸಂಗ್ರಹಕರು ಆ ಪ್ರದೇಶದ ಇಬ್ಬರು ಹಿರಿಯ ನಾಗರಿಕರು ಹಾಗೂ ಒಬ್ಬ ಜನಪ್ರತಿನಿಧಿಯಿಂದ ಹಾಗೂ ಆಯಾ ಮನೆಯ ಸದಸ್ಯರಿಂದ ಸಹಿ ಮಾಡಿ ದೃಢೀಕರಿಸಬೇಕು. ಆಗ ಮಾತ್ರ ಅವರಿಗೆ ಸಂಭಾವನೆ ನೀಡಲಾಗುವುದು ಎಂದರು. ಯೋಜನಾಧಿಕಾರಿ ರಾಜಪ್ಪ, ನಗರಸಭೆ ಆಯುಕ್ತ ಗಣೇಶ್, ಎಂಜಿನಿಯರ್ ಮನುಕುಮಾರ್ ಇದ್ದರು.
ಸದ್ಯಕ್ಕೆ ಒತ್ತುವರಿ ತೆರವು ಇಲ್ಲ
ಶಿವಮೊಗ್ಗ: ಮೇ ಅಂತ್ಯದ ವರೆಗೆ ಒತ್ತುವರಿ ತೆರವು ಮಾಡಿರುವ ಪ್ರದೇಶದಲ್ಲಿ ಮಾತ್ರ ಸಸಿ ನೆಡಲಾಗುವುದು. ಸದ್ಯಕ್ಕೆ ಒತ್ತುವರಿ ತೆರವು ಕೈಗೊಳ್ಳುವುದಿಲ್ಲ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದ್ದಾರೆ.
ಮಳೆಗಾಲವಾದ್ದರಿಂದ ಅಧಿಕಾರಿಗಳು ಈ ಸಂದರ್ಭದಲ್ಲಿ ಸಸಿ ನೆಡುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಈ ಕಾರ್ಯ ಮೂರ್ನಾಲ್ಕು ತಿಂಗಳು ನಡೆಯಲಿದೆ. ಅಷ್ಟರಲ್ಲಿ ರಾಜ್ಯ ಸರ್ಕಾರದಿಂದ ಒತ್ತುವರಿ ತೆರವು ವಿಷಯದ ಬಗ್ಗೆ ಹೊಸ ಸ್ಪಷ್ಟನೆ ಬರಬಹುದೆಂಬ ನಿರೀಕ್ಷೆ ಇದೆ ಎಂದರು.
ಈಗಾಗಲೇ ತೆರವು ಮಾಡಿರುವ ಜಾಗವನ್ನು ಮತ್ತೆ ಒತ್ತುವರಿ ಮಾಡಲು ಬಿಡುವುದಿಲ್ಲ. ಇಲ್ಲಿ ಸಸಿ ನೆಡುವಿಕೆ ನಡೆಯಲಿದೆ ಎಂದರು.
ನಗರಸಭೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಕಾರ್ಯ ಸದ್ಯಕ್ಕಿಲ್ಲ. ಮೂರ್ನಾಲ್ಕು ತಿಂಗಳು ಜಿಲ್ಲಾಡಳಿತವೇ ನಿರ್ವಹಿಸಲಿದೆ. ನಂತರ ಈ ಬಗ್ಗೆ ಚಿಂತಿಸಲಾಗುವುದು ಎಂದರು.