ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.22
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕರುಣಾಗೃಹ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೃಹ ಕಾರ್ಮಿಕರು ಬಡವರು, ಅವಿದ್ಯಾವಂತರಾಗಿದ್ದು, ಜೀವನ ನಿರ್ವಹಣೆಗಾಗಿ ಶ್ರೀಮಂತರ ಮನೆಗಳಲ್ಲಿ ಕಸ ಗುಡಿಸುವ, ಮನೆ ಒರೆಸುವ, ಬಟ್ಟೆ ಒಗೆಯುವ, ಅಡುಗೆ ಮಾಡುವ ಮಕ್ಕಳ ಹಿರಿಯರ ಪೋಷಣೆಯ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಮನೆಕೆಲಸಗಾರರನ್ನು ಅಸ್ಪೃಶ್ಯರಂತೆ ಕಾಣುವದರೊಂದಿಗೆ ಪ್ರತ್ಯೇಕ ಆಹಾರ ನೀಡುತ್ತಾ ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ನಮಗೂ ಸೌಲಭ್ಯ ನೀಡಿ: ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಗೃಹ ಕಾರ್ಮಿಕರು ಕೂಡ ಇತರ ಕಾರ್ಮಿಕರಂತೆ ಎಂಬ ಒಡಂಬಡಿಕೆ 189ನ್ನು ಅಂಗೀಕರಿಸಿ ಗೃಹ ಕಾರ್ಮಿಕರಿಗೂ ಇತರೆ ಕಾರ್ಮಿಕರಂತೆ ಹಕ್ಕನ್ನು ನೀಡಿದೆ. ಆದರಿಂದ ಗೃಹ ಕಾರ್ಮಿಕರಿಗೂ ಭದ್ರತೆ, ಸಮಾನತೆ, ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಅವಕಾಶ, ವಾರದ ರಜೆ, ಕನಿಷ್ಠ ಕೂಲಿ, ಆರೋಗ್ಯ ವಿಮೆ, ಭವಿಷ್ಯ ನಿಧಿ, ಶಿಶುಪಾಲನೆ, ಪೋಷಣೆಗೆ ವಿಶೇಷ ಸೌಲಭ್ಯ, ಪಿಂಚಣಿ ಹಾಗೂ ವಸತಿ ಸೌಕರ್ಯ ಮತ್ತಿತರ ಸೌಲಭ್ಯಗಳನ್ನು ನೀಡಲು, ತ್ರಿಪಕ್ಷ ಮಂಡಳಿಯನ್ನು ರಚಿಸಲು ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದರು.
ಗೃಹ ಕಾರ್ಮಿಕರನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕು, ಸುರಕ್ಷತೆ ಮತ್ತು ಆರೋಗ್ಯಕರ ಪರಿಸರದಲ್ಲಿ ಕೆಲಸ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು. ಕಾರ್ಮಿಕರಿಗೆ ಪ್ರತ್ಯೇಕ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಬೇಕು, ಲೈಂಗಿಕ ಕಿರುಕುಳದ ದೂರು ನಿವಾರಣೆಗೆ ಮಂಡಳಿಯಲ್ಲಿ ಸಹಾಯವಾಣಿ ಸ್ಥಾಪಿಸಬೇಕು, ಜೀತದಾಳು ಮತ್ತು ಬಾಲಕಾರ್ಮಿಕರನ್ನು ರಕ್ಷಿಸಲು ಕ್ರಮಕೈಗೊಳ್ಳಬೇಕು. ಚಾನಲ್ ಏರಿಯಾದಲ್ಲಿರುವ ಗೃಹ ಕಾರ್ಮಿಕರಿಗೆ ಹಕ್ಕು ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನೋಂದಣಿ ಕಡ್ಡಾಯ: ಕೆಲಸದ ಅವಧಿ ಕಡ್ಡಾಯವಾಗಬೇಕು, ವಾರಕ್ಕೊಂದು ರಜೆ ನೀಡಬೇಕು, ಗೃಹ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.