ಹಿಂದೂಗಳ ಮೇಲಿನ ದೌರ್ಜನ್ಯ ವಿರುದ್ಧ ಧ್ವನಿ ಎತ್ತುತ್ತಿಲ್ಲ: ಮುತಾಲಿಕ್
ಕ.ಪ್ರ.ವಾರ್ತೆ, ಸಾಗರ, ಜೂ.21
ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಇದರ ವಿರುದ್ಧ ಯಾವೊಬ್ಬ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ತಾಲೂಕಿನ ವರದಹಳ್ಳಿಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀರಾಮ ಸೇನೆ ರಾಜ್ಯಮಟ್ಟದ ಪ್ರಾಂತವರ್ಗದಲ್ಲಿ, ಹಿಂದೂಗಳಲ್ಲಿನ ಅನಾಥಭಾವನೆ ತೊಲಗಿಸುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ದೇಶವ್ಯಾಪಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮೀನಾಮೇಷ: ದೇಶದಲ್ಲಿ ಮತಾಂತರ, ಗೋಹತ್ಯೆ, ಭ್ರಷ್ಟಾಚಾರ, ಭಯೋತ್ಪಾದನೆಯಂತಹ ಕೃತ್ಯಗಳು ಹೆಚ್ಚುತ್ತಿದೆ. ಗೋಹತ್ಯಾ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತರಲು ಮೀನಾಮೇಷ ಎಣಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿತನದಿಂದಾಗಿ ಗೋಸಂತತಿ ನಶಿಸುತ್ತಿದೆ. ಆದರೆ ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು.
ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವ ಹಿಂದೂಬಾಂಧವರನ್ನು ಸಂಘಟಿಸುವ ಕೆಲಸ ತುರ್ತಾಗಿ ಆಗಬೇಕು ಎಂದು ಹೇಳಿದರು.
ಹಿಂದುತ್ವ ಪ್ರತಿಪಾದನೆ ಸಾಧ್ಯ: ಬಿಜೆಪಿ ತಾಲೂಕು ಅಧ್ಯಕ್ಷ ಯು.ಎಚ್. ರಾಮಪ್ಪ ಮಾತನಾಡಿ, ಹಿಂದುಗಳಲ್ಲಿನ ಸಂಘಟನೆ ಕೊರತೆಯಿಂದಾಗಿ ದಬ್ಬಾಳಿಕೆ, ದೌರ್ಜನ್ಯ ಹೆಚ್ಚುತ್ತಿದ್ದು, ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರುವ ಇಚ್ಛಾಶಕ್ತಿ ನಮ್ಮ ರಾಜಕಾರಣಿಗಳಿಗೆ ಇಲ್ಲವಾಗಿದೆ. ಸಂಘಟನಾತ್ಮಕ ಧ್ವನಿಯಿಂದ ಮಾತ್ರ ಹಿಂದುತ್ವ ಪ್ರತಿಪಾದನೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕಣರ್, ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ಕುಮಾರ್ ಕೊಪ್ಪ, ಕರ್ನಾಟಕ ಉತ್ತರ ಭಾಗದ ಉಪಾಧ್ಯಕ್ಷ ಬಸವರಾಜ ಮಹಾಲಿಂಗೇಶ್ವರ ಮಠ, ಪ್ರಧಾನ ಕಾರ್ಯದರ್ಶಿ ವಿನಾಯಕ ಬಂಕಾಪುರ, ಸಂಘಟನಾ ಕಾರ್ಯದರ್ಶಿ ಬಸವರಾಜ ಬೂದಿಹಾಳ ಹಾಜರಿದ್ದರು.