ಬಡಜನರಿಗೆ ನ್ಯಾಯವಾಗಿ ಪಡಿತರ ಒದಗಿಸಿ
ಕ.ಪ್ರ.ವಾರ್ತೆ , ಭದ್ರಾವತಿ , ಜೂ. 23
ಸರ್ಕಾರ ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಬರಾಜು ಮಾಡುವ ವಸ್ತುಗಳನ್ನು ಬಡಜನರಿಗೆ ನ್ಯಾಯವಾಗಿ ದೊರಕುವಂತೆ ವಿತರಿಸುವ ಜವಾಬ್ದಾರಿ ಪಡಿತರ ವಿತರಕರ ಹೆಗಲ ಮೇಲಿದೆ ಎಂದು ಶಾಸಕ ಎಂ.ಜೆ. ಅಪ್ಪಾಜಿ ತಿಳಿಸಿದರು.
ಅವರು ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ನಗರ ಪಡಿತರ ವಿತರಕರ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನ್ಯಾಯಬೆಲೆ ಅಂಗಡಿಗಳು ಪಟ್ಟಣದಲ್ಲಿ ಕೆಲಸದ ವೇಳೆಯನ್ನು ಮತ್ತು ಪಡಿತರ ವಿತರಣೆ ಸಮಯವನ್ನು ಕಡ್ಡಾಯವಾಗಿ ತಮ್ಮ ಅಂಗಡಿಗಳಲ್ಲಿ ಪ್ರದರ್ಶಿಸುವಂತೆ ಒತ್ತಾಯಿಸಿದರು.
ಸೂಕ್ತ ವ್ಯವಸ್ಥೆ: ಕೂಲಿ ಕೆಲಸಕ್ಕೆ ಹೋಗುವ ಬಡತನದ ರೇಖೆಗಿಂತ ಕೆಳಗಿರುವ ಜನರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಎಡತಾಕುವುದು ಸರಿಯಲ್ಲ. ಅವರಿಗೆ ಕ್ಲಿಪ್ತ ಸಮಯದಲ್ಲಿ ಪಡಿತರ ಸಿಗುವ ವ್ಯವಸ್ಥೆಯಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಮುಖ್ಯಮಂತ್ರಿಗಳು ಮುಂದಿನ ತಿಂಗಳಿನಿಂದ ರು. 1ಕ್ಕೆ ಒಂದು ಕಿಲೋ ಅಕ್ಕಿಯಂತೆ ಬಿಪಿಎಲ್ ಕಾರ್ಡ್‌ದಾರರಿಗೆ ತಿಂಗಳಿಗೆ 30 ಕಿಲೋ ಅಕ್ಕಿ ವಿತರಿಸುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಕಾರ್ಡುಗಳನ್ನು ಹಂಚುವ ಕಾರ್ಯಕ್ರಮ ಆಮೆಗತಿಯಲ್ಲಿ ಸಾಗುತ್ತಿದೆ. ದಿನವೊಂದಕ್ಕೆ ಆನ್‌ಲೈನ್‌ನಲ್ಲಿ ಕೇವಲ ಐದರಿಂದ ಆರು ಕಾರ್ಡುಗಳನ್ನು ನೀಡಲು ಮಾತ್ರ ಸಾಧ್ಯವಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇನ್ನೂ 30,000 ಕಾರ್ಡುಗಳನ್ನು ನೀಡಬೇಕಾಗಿದೆ. ಇದು ಮುಗಿಯುವುದು ಯಾವಾಗ ಮತ್ತು ಬಿಪಿಲ್ ಕಾರ್ಡುದಾರರಿಗೆ 30 ಕಿಲೋ ಅಕ್ಕಿ ಸಿಗುವುದು ಯಾವಾಗ ಎಂದು ಪ್ರಶ್ನಿಸಿದರು.
ಶೀಘ್ರ ಹಂಚಬೇಕು: ಆನ್‌ಲೈನ್ ಪಡಿತರ ವಿತರಣಾ ವ್ಯವಸ್ಥೆ ಆರ್ಹ ವ್ಯಕ್ತಿಯನ್ನು ಗುರುತಿಸಿ ಕೊಡ ಮಾಡಿರುವುದು ಸರಿಯಾಗಿದೆಯಾದರೂ, ಅದು ಪ್ರಯೋಗಾತ್ಮಕವೇ ಎಂಬುದನ್ನು ಸರ್ಕಾರ ಚಿಂತಿಸಬೇಕಿತ್ತು. ಇಲ್ಲವೇ ಹೆಚ್ಚಿನ ವಿತರಣಾ ಕೇಂದ್ರಗಳನ್ನು ತೆರೆದು ಅರ್ಹ ವ್ಯಕ್ತಿಗಳಿಗೆ ಶೀಘ್ರವಾಗಿ ಬಿಪಿಎಲ್ ಕಾರ್ಡುಗಳನ್ನು ಹಂಚುವ ವ್ಯವಸ್ಥೆ ಮಾಡಬೇಕಿತ್ತು. ಯೋಜನೆಗಳು ವೈಜ್ಞಾನಿಕ ಚಿಂತನೆಯಿಂದ ಕೂಡಿರಬೇಕು ಎಂದು ಅವರು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷರ ಜಿ.ವಿ. ದೊಡ್ಡವೀರಯ್ಯ ಹಾಗೂ ರಾಜಗೋಪಾಲ ನಾಯ್ಡು ಮಾತನಾಡಿದರು. ಅವರುಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಸಿ.ಆರ್. ಶಿವರಾಂ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸಿದ್ದಲಿಂಗಯ್ಯ, ಜನತಾದಳದ ತಾಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಪಡಿತರ ವಿತರಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಾಚಾರ್, ಇಲಾಖೆ ಸಹಾಯಕ ನಿರ್ದೇಶಕ ಜಯಣ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಕುಮಾರ್, ಸಹಕಾರ್ಯದರ್ಶಿ ಆರ್.ಮಣಿ, ಖಜಾಂಚಿ ಕೃಷ್ಣೋಜಿರಾವ್ ಮೊದಲಾದವರು ಉಪಸ್ಥಿತರಿದ್ದರು. ಲೋಹಿತೋಶ್ವರಸ್ಮಾಮಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಜಿ.ಡಿ. ನಟರಾಜ್ ಸ್ವಾಗತಿಸಿದರು. ವಾಗೀಶ್ ನಿರೂಪಿಸಿದರು. ಮೋಹನ್ ಕುಮಾರ್ ವಂದಿಸಿದರು.