ಅತ್ಯಾಚಾರ: ಆರ್ಥಿಕ ನಿಧಿ ಸ್ಥಾಪಿಸಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.24
ಅತ್ಯಾಚಾರಕ್ಕೊಳಗಾದವರಿಗೆ ನೈತಿಕ ಬೆಂಬಲ ನೀಡುವುದರೊಂದಿಗೆ ಅವರ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವೇ ಬಜೆಟ್ನಲ್ಲಿ ಆರ್ಥಿಕ ನಿಧಿ ಸ್ಥಾಪಿಸಬೇಕು ಎಂದು ಕೆಜೆಪಿ ಮಹಿಳಾ ಘಟಕ ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಇಲ್ಲಿಯವರೆಗೆ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೊಂದ ಮಹಿಳೆಯ ಪರವಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಆಕೆಗೆ ನೈತಿಕ ಸ್ಥೈರ್ಯ ತುಂಬುವ ಅಥವಾ ಆರ್ಥಿಕ ಸುರಕ್ಷತೆ ನೀಡುವ ಕ್ರಮ ಕೈಗೊಳ್ಳುವ ಕಾರ್ಯ ನಡೆದಿಲ್ಲ. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಆಲೋಚಿಸಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ತೀವ್ರ ಖಂಡನೆ: ಮಣಿಪಾಲ ವಿಶ್ವವಿದ್ಯಾಲಯ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಹಾಗೂ ಅತ್ಯಾಚಾರದ ಪ್ರಕರಣವನ್ನು ರಾಜ್ಯ ಮಹಿಳಾ ಘಟಕ ತೀವ್ರ ಖಂಡಿಸಿದ್ದು, ಆರೋಪಿಗಳಿಗೆ ಶಿಕ್ಷಿಸುವ ಜೊತೆಗೆ ಅತ್ಯಾಚಾರಕ್ಕೊಳಗಾದ ಯುವತಿಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅತ್ಯಾಚಾರ ಘಟನೆ ಕ್ಯಾಂಪಸ್ನ ಎಲ್ಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಅತ್ಯಾಚಾರಕ್ಕೊಳಗಾದ ಯುವತಿಗೆ ಮಾನಸಿಕ, ದೈಹಿಕ ಸುರಕ್ಷತೆಯ ಜೊತೆ ಮುಂದಿನ ಸಂಪೂರ್ಣ ಮುತುವರ್ಜಿಯನ್ನು ಸರ್ಕಾರವೇ ಹೊರಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.
ಸಿಸಿ ಕ್ಯಾಮೆರಾ: ಪೊಲೀಸ್ ಇಲಾಖೆ ಸೂಚನೆ ಅನುಸಾರ ಕ್ಯಾಂಪಸ್ ಆವರಣದಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸಿಸಿ ಕ್ಯಾಮರಾ ಅಳವಡಿಸಬೇಕಿತ್ತು. ಆದರೆ ಅಳವಡಿಸಿಲ್ಲ. ಜೊತೆಗೆ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಘಟನೆ ಹಿನ್ನೆಲೆಯಲ್ಲಿ ಸಂಪೂರ್ಣ ಹೊಣೆಯನ್ನು ಆಡಳಿತ ಮಂಡಳಿಗೆ ಹೊರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾನುವಾರ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಉಡುಪಿಗೆ ಭೇಟಿ ನೀಡಿದ್ದು, ಈ ಘಟನೆ ಬಗ್ಗೆ ಮಾತ್ರ ಮಾತನಾಡಿರುವುದನ್ನು ನೋಡಿದರೆ ಅವರ ಬಗ್ಗೆ ಅನುಕಂಪ ಹುಟ್ಟುತ್ತದೆ. ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವ ಉಡುಪಿ, ಉತ್ತರ ಕನ್ನಡ, ಮಂಗಳೂರಿನಲ್ಲಿ ಆತ್ಯಾಚಾರ, ಡ್ರಗ್ಸ್ ಸೇರಿದಂತೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಅವುಗಳ ವಿರುದ್ಧ ಚಕಾರ ಎತ್ತದಿರುವುದು ದುರಂತದ ಸಂಗತಿ ಎಂದರು.
ಸಂಪೂರ್ಣ ವಿಫಲ: ಕರಾವಳಿ ಪ್ರದೇಶದ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರು ಇಲ್ಲಿ ಸಂಪೂರ್ಣ ಸುರಕ್ಷತೆಗೆ ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ. ಪೊಲೀಸರ ಕಾನೂನು ಕ್ರಮಕ್ಕೆ ಸಂಪೂರ್ಣ ಸ್ವತಂತ್ರ ನೀಡಬೇಕು ಎಂದು ಒತ್ತಾಯಿಸಿದರು.
ಮಣಿಪಾಲದ ಘಟನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ನೀಡಿರುವ ಹೇಳಿಕೆ ಸರಿಯಲ್ಲ. ಇದು ಸರ್ಕಾರದ ಹೊಣೆಯಲ್ಲ. ಜನ ಜಾಗೃತಿ ಕೆಲಸ ಎಂದಿದ್ದಾರೆ. ದಯಮಾಡಿ ಅವರು ಕಾನೂನು ತಿಳವಳಿಕೆ ಪಡೆದು ಮಾತನಾಡಲಿ. ಸುಖಾಸುಮ್ಮನೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಲಿ ಎಂದರು.
ಸಾಕಷ್ಟು ಕಿರಿಕಿರಿ: ಮಲೆನಾಡಿನ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಸಾಕಷ್ಟು ಕಿರಿಕಿರಿ ಘಟನೆ ನಿರಂತರವಾಗಿ ನಡೆಯುತ್ತಿದ್ದು, ಇವುಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗದಲ್ಲಿ ಇನ್ನೂ ಹೆಚ್ಚುತ್ತಿರುವ ಸರಗಳ್ಳತನದ ಪ್ರಕರಣ ಗಮನಿಸಿದರೆ ಮಹಿಳೆಯರು ಹಾಗೂ ಯುವತಿಯರು ಸಾಕಷ್ಟು ಆತಂಕಗೊಂಡಿದ್ದಾರೆ ಎಂದರು.
ರಮನ್ ಗುಪ್ತಾ ಅವರು ರಕ್ಷಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಇದ್ದಂತಹ ಭದ್ರತೆ ಈಗಿಲ್ಲ. ಈಗಿನ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚಿಸಲಿದ್ದು, ನಗರದಲ್ಲಿ ಸೂಕ್ತ ಭದ್ರತೆಗೆ ಮನವಿ ಮಾಡುವುದಾಗಿ ಹೇಳಿದರು.
ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಏಸುದಾಸ್, ಬಿಳಕಿ ಕೃಷ್ಣಮೂರ್ತಿ, ಐಡಿಯಲ್ ಗೋಪಿ, ಸಂತೋಷ್ ಬಳ್ಳೇಕೆರೆ ಮೊದಲಾದವರು ಇದ್ದರು.