ಕಾಲಮಿತಿಯೊಳಗೆ ಲೆವಿ ಅಕ್ಕಿ ನೀಡಿ: ಡಿಸಿ ಬನ್ಸಾಲ್
ಶಿವಮೊಗ್ಗ: ಸರ್ಕಾರ ನಿಗದಿಪಡಿಸಿದ (ಜುಲೈ 28) ಕಾಲಮಿತಿಯೊಳಗೆ ಲೆವಿ ಅಕ್ಕಿಯನ್ನು ರೈಸ್ಮಿಲ್ ಮಾಲೀಕರು ನೀಡದಿದ್ದರೆ ಮಾಲೀಕರ ಮೇಲೆ ನಿರ್ಧಾಕ್ಷಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಲೆವಿ ಅಕ್ಕಿ ಸಂಗ್ರಹಕ್ಕೆ ಸಂಬಂಧಿಸಿದಂತೆ ನಡೆದ ಆಹಾರ ಇಲಾಖೆ, ನಿಗಮ ಹಾಗೂ ರೈಸ್ಮಿಲ್ ಮಾಲೀಕರುಗಳ ಸಭೆಯಲ್ಲಿ ಅವರು, ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಕೆ.ಜಿ.ಗೆ 1 ರುಪಾಯಿ ದರದಲ್ಲಿ ಅಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಸರ್ಕಾರ ಹೊರ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸುತ್ತಿದ್ದು, ರೈಸ್ ಮಿಲ್ಗಳಿಂದ ಕಾಲಮಿತಿಯೊಳಗೆ ನಿಗದಿಪಡಿಸಿದ ಲೆವಿ ಅಕ್ಕಿಯನ್ನು ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ರೈಸ್ಮಿಲ್ ಮಾಲೀಕರು ಸರ್ಕಾರದ ಆದೇಶವನ್ನು ಅರ್ಥೈಸಿಕೊಂಡು ಜುಲೈ 28ರೊಳಗೆ ನಿಗದಿಪಡಿಸಿದ ಹಾಗೂ ಬಾಕಿ ಇರುವ ಲೆವಿ ಅಕ್ಕಿಯನ್ನು ಶೀಘ್ರವೇ ನೀಡಬೇಕು. ಇಲ್ಲವಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೆವಿ ಅಕ್ಕಿ ಸಂಗ್ರಹದ ವೇಳೆ ಅಕ್ಕಿಯ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಿ ನಂತರ ಸಂಗ್ರಹ ಮಾಡಿ, ಕಳಪೆ ಅಕ್ಕಿಯನ್ನು ಖರೀದಿಸಬೇಡಿ ಎಂದು ಆಹಾರ ನಿಗಮದ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಸ್ ಮಿಲ್ ಮಾಲೀಕರು, ಕೂಡಲೇ ಅಕ್ಕಿ ನೀಡುವಂತೆ ಆಗ್ರಹಿಸಿದರೆ ಸಾಧ್ಯವಿಲ್ಲ. ಕನಿಷ್ಠ 2-3 ತಿಂಗಳ ಕಾಲಾವಧಿ ನೀಡಬೇಕು. ಪ್ರಸ್ತುತ ನಮ್ಮ ಬಳಿ ಅಕ್ಕಿ ಮಾರಾಟವಾಗಿದೆ. ಇದೀಗ ಏಕಾಏಕಿ ಅಕ್ಕಿ ನೀಡುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದರು.
ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಯಾವುದೇ ಕಾರಣಕ್ಕೂ ನಿಮ್ಮ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ಅಕ್ಕಿ ನೀಡಿ ಎಂದರು. ಸಭೆಯಲ್ಲಿ ಉಪವಿಭಾಗಧಿಕಾರಿ ಕುಸುಮ ಕುಮಾರಿ, ಆಹಾರ ಇಲಾಖೆ ಅಧಿಕಾರಿ ವಿಶ್ವನಾಥ್, ಮಂಜುನಾಥ್ ಮಾರ್ಪಳ್ಳಿ ಮತ್ತಿತರರು ಇದ್ದರು.