ಪ್ರತಿ ಗ್ರಾಪಂನಲ್ಲಿ ವಿಶೇಷ ಸಭೆ ನಡೆಸಲು ಸೂಚನೆ
ಸಾಗರ: ಜುಲೈ ತಿಂಗಳಿನಲ್ಲಿ ಪ್ರತಿ ಗ್ರಾಪಂನಲ್ಲಿ ವಿಶೇಷ ಸಾಮಾನ್ಯಸಭೆ ನಡೆಸುವ ಮೂಲಕ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಅಧಿಕಾರಿಗಳ, ಪಂಚಾಯ್ತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಮರುಕಳಿಸಿದಂತೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಬೇಕು. ತೆರೆದ ಬಾವಿ ನಿರ್ಮಾಣದ ಜೊತೆಗೆ ಸ್ಥಳೀಯರ ಅಭಿಪ್ರಾಯ ಪಡೆದು ಹಿಂದೆ ನೀರು ಪೂರೈಕೆ ಮಾಡುತ್ತಿದ್ದ ಕೆರೆಕಟ್ಟೆಗಳ ಹೂಳನ್ನು ತೆಗೆದು ಅಭಿವೃದ್ಧಿಪಡಿಸುವಂತೆ ತಿಳಿಸಿದ ಅವರು ಇದಕ್ಕೆ ತಗಲುವ ವೆಚ್ಚವನ್ನು ಟಾಸ್ಕ್ ಫೋರ್ಸ್ ಅಥವಾ ಜಲಸಂಪನ್ಮೂಲ ಯೋಜನೆಯಡಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ವಿದ್ಯುತ್ ಸಮಸ್ಯೆ ನಿವಾರಣೆ: ಶರಾವತಿ ಹಿನ್ನೀರು ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದ ಅವರು, ಬ್ಯಾಕೋಡ್ ಬಳಿ ನಿರ್ಮಿಸುತ್ತಿರುವ ಗ್ರಿಡ್ ಕಾಮಗಾರಿ ಕುರಿತು ಪೂರ್ಣ ವಿವರವನ್ನು ಜಿಪಂಗೆ ನೀಡುವಂತೆ ಸೂಚಿಸಿದರು.
ಉದ್ಯೋಗಖಾತ್ರಿ ಯೋಜನೆಯಡಿ ಮಲೆನಾಡು ಭಾಗದಲ್ಲಿ ಇಂಗುಗುಂಡಿ ಮೂಲಕ ನೀರು ಇಂಗಿಸುವಿಕೆ, ಜಮೀನು ಸಮತಟ್ಟು ಮಾಡಿ ಕೃಷಿಗೆ ಯೋಗ್ಯಗೊಳಿಸುವುದು, ಬಸ್ಸು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ, ಅಂಗನವಾಡಿ ನಿರ್ಮಾಣ, ತೆರೆದ ಬಾವಿ ನಿರ್ಮಾಣ ಕಾಮಗಾರಿಗಳನ್ನು ಸೇರಿಸಲಾಗಿದ್ದು, ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂತಹ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದರು.
ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ ಹಾಜರಿದ್ದರು.