ಏತ ನೀರಾವರಿ ಯೋಜನೆಗೆ ಪುನಃ ಚಾಲನೆ
ಸೊರಬ: ಹಿಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಚಾಲನೆ ನೀಡಿದ್ದ ಏತ ನೀರಾವರಿ ಯೋಜನೆಗೆ ಪುನಃ ಚಾಲನೆ ನೀಡಲು ಚಿಂತಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಆನವಟ್ಟಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಆನವಟ್ಟಿ ಹೋಬಳಿಯನ್ನು ಸಂಪೂರ್ಣ ನೀರಾವರಿಯನ್ನಾಗಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆದಿದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದರು. ಕಳಪೆ ಕಾಮಗಾರಿಗಳಿಗೆ ಎಂದಿಗೂ ಪ್ರೋತ್ಸಾಹವಿಲ್ಲ, ಇಲ್ಲಿನ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಹಾಗೂ ದಂಡಾವತಿ ಯೋಜನೆಯಡಿ ಎಸ್ಸಿ, ಎಸ್ಟಿ ಕಾರ್ಪೋರೇಷನ್ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಮೇಲ್ನೋಟಕ್ಕೆ ಕಳಪೆ ಎಂದು ಕಂಡುಬಂದಿದೆ, ಈ ಕುರಿತು ಸಮಗ್ರ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.
ತಾಪಂ ಅಧ್ಯಕ್ಷ ಸದಾನಂದಗೌಡ ಗ್ರಾಪಂ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಗ್ರಾಪಂ ಸದಸ್ಯ ಎಂ. ಶ್ರೀನಾಥ್ ಗ್ರಾಮಕ್ಕೆ ಅಗತ್ಯವಿರುವ ಬಸ್ಸು ನಿಲ್ದಾಣದ ನಿರ್ಮಾಣ, ತ್ಯಾಜ್ಯ ವಿಲೇವರಿ ಘಟಕ, ನೀರಿನ ಟ್ಯಾಂಕ್, ಆಧಾರ ಕಾರ್ಡ್ ವಿತರಣೆ ಹಾಗೂ ಸುವರ್ಣ ಯೋಜನೆಗೆ ಗ್ರಾಮವನ್ನು ಒಳಪಡಿಸುವಂತೆ ಗ್ರಾಮದ ವತಿಯಿಂದ ಮನವಿ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್, ತಾಪಂ ಅಧ್ಯಕ್ಷ ಸದಾನಂದಗೌಡ, ಸದಸ್ಯ ಬಸವಲಿಂಗಪ್ಪ, ಇಒ ಮಂಜುಳಾದೇವಿ, ಕಂದಾಯ ಇಲಾಖೆ ಅಧಿಕಾರಿ ಧರ್ಮೋಜಿ, ಪಿಡಿಒ ನೀಲಪ್ಪ ಭೂತಣ್ಣನವರ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.