ಡೆಂಘೀ ನಿಯಂತ್ರಣಕ್ಕೆ ಜಾಗ್ರತೆ ವಹಿಸಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜೂ.25
ಡೆಂಘೀ ಜ್ವರದ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ಗ್ರಾಮಾಂತರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಅರಿವು ಮೂಡಿಸಲು ಮನೆಮನೆಗೆ ಭೇಟಿ ನೀಡಿ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಹೇಳಿದರು.
ಶಿವಮೊಗ್ಗ ಸಮೀಪದ ಪಿಳ್ಳಂಗೆರೆ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸ್ವಸಹಾಯ ಗುಂಪುಗಳ ಸಹಯೋಗದೊಂದಿಗೆ ಡೆಂಘೀ ಜ್ವರ ನಿಯಂತ್ರಣದ ಕುರಿತು ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಮಾಹಿತಿ ನೀಡಿದರು.
ಮುಂಜಾಗ್ರತೆ ವಹಿಸಿ: ಸೊಳ್ಳೆಯಿಂದ ಹರಡುವ ಡೆಂಘೀ ಜ್ವರದ ಕುರಿತು ಜನರಲ್ಲಿ ಅನಗತ್ಯ ಭಯ ಬೇಡ ಎಂದ ಅವರು, ಈ ರೋಗ ಹರಡುವ ಮುನ್ನ ಅದರ ನಿಯಂತ್ರಣಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಜಾಣತನ ಎಂದು ಹೇಳಿದರು.
ಇಲಾಖೆ ವತಿಯಿಂದ ಈಗಾಗಲೇ ಜಿಲ್ಲೆಯಾದ್ಯಂತ ಮೊದಲ ಎರಡು ಸುತ್ತಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪ್ರಸ್ತುತ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಮತ್ತೊಂದು ಸುತ್ತಿನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಹಂತದಲ್ಲೇ ನಿಯಂತ್ರಿಸಿ: ಮನೆಯ ಒಳಗೂ ಮತ್ತು ಹೊರಗೂ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಸೊಳ್ಳೆಗಳನ್ನು ನಿಯಂತ್ರಿಸುವ ವಿಧಾನಗಳನ್ನು ಅನುಸರಿಸಬೇಕು. ಪ್ರತಿನಿತ್ಯ ಮನೆಯಲ್ಲಿ ನೀರಿನ ಸಂಗ್ರಹಗಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಬೇಕು.
ನೀರನ್ನು ಸಂಗ್ರಹಿಸಿ ಖಾಲಿ ಮಾಡಲಾಗದ ತೊಟ್ಟಿಗಳಲ್ಲಿ ಲಾರ್ವಾಗಳನ್ನು ಭಕ್ಷಿಸುವ ಗಪ್ಪಿಜಾತಿಯ ಮೀನು ಮರಿಗಳನ್ನು ಇಲಾಖಾ ವತಿಯಿಂದ ಬಿಡಲಾಗುತ್ತಿದೆ. ಇದರಿಂದಾಗಿ ಸೊಳ್ಳೆಯ ಸಂತತಿ ಬೆಳವಣಿಗೆಯನ್ನು ಪ್ರಾಥಮಿಕ ಹಂತದಲ್ಲೇ ನಿಯಂತ್ರಿಸಬಹುದಾಗಿದೆ ಎಂದರು.
186 ಪ್ರಕರಣ: ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ ಎಂದ ಅವರು ಈವರೆಗೆ ಜಿಲ್ಲೆಯಲ್ಲಿ 120 ಹಾಗೂ ಮಣಿಪಾಲದ ಲ್ಯಾಬೋರೇಟರಿಯ ವರದಿಯಿಂದ 66 ಡೆಂಘೀ ಪ್ರಕರಣಗಳು ಸೇರಿದಂತೆ ಒಟ್ಟು 186 ಪ್ರಕರಣಗಳನ್ನು ಗುರುತಿಸಲಾಗಿದ್ದು, 1 ಸಾವಿನ ಪ್ರಕರಣ ಕಂಡುಬಂದಿದೆ ಎಂದರು.
ಆರೋಗ್ಯ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳಿಂದ ಗ್ರಾಮದ ಬೀದಿಬೀದಿಗಳಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಪಾವನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಉಪಸ್ಥಿತರಿದ್ದರು.
ಆಶಾ, ಅಂಗನವಾಡಿ ಮತ್ತು ಆರೋಗ್ಯ ಇಲಾಖೆ ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಡೆಂಘೀ ನಿಯಂತ್ರಣದ ಬಗ್ಗೆ ವೈಜ್ಞಾನಿಕವಾದ ಮಾಹಿತಿ ನೀಡಿದರು.