ಬಾಲಕ ಸಾವು; ಪ್ರತಿಭಟನೆ
ಸೊರಬ: ವೈದ್ಯರ ಕೊರತೆಯೆ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ಬಾಲಕನ ಶವವಿಟ್ಟು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ಜಡೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಸಾಲಿಗೆ ಗ್ರಾಮದ ಬಾಲಕ ಸಂದೀಪ (12) ಕಳೆದೆರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ. ಸೋಮವಾರ ಮಧ್ಯಾಹ್ನ ಪೋಷಕರು ಜಡೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಶಿರಸಿ ಖಾಸಗಿ ಆಸ್ಪತ್ರಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಬಾಲಕ ಮೃತಪಟ್ಟಿದ್ದಾನೆ.
ಇದೇ ಕಾರಣ ಇರಿಸಿಕೊಂಡು ಜಡೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶಗೊಂಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ಸಕಾಲಕ್ಕೆ ಬಾಲಕನಿಗೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿ, ವೈದ್ಯ, ದಾದಿಯರ ನೇಮಕವಾಗಬೇಕು ಎಂದು ಆಗ್ರಹಿಸಿ ಆಸ್ಪತ್ರೆಗೆ ಬೀಗ ಜಡಿದರು.
ತಾಲೂಕು ಪ್ರವಾಸದಲ್ಲಿರುವ ಶಾಸಕ ಮಧುಬಂಗಾರಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಆಲಿಸಿದರು. ವೈದ್ಯರ ಕೊರತೆ ಸಮಸ್ಯೆ ಕೇವಲ ಇಲ್ಲಿಯದಲ್ಲ, ಇಡೀ ರಾಜ್ಯ ಎದುರಿಸುತ್ತಿದ್ದು, ಈ ಕುರಿತು ವಿಧಾನಸಭಾ ಕಲಾಪಗಳಲ್ಲಿ ಚರ್ಚೆಯಾಗಿದೆ. ಪ್ರಸ್ತುತ ತಾತ್ಕಾಲಿಕವಾಗಿ ವಾರಕ್ಕೆ ಮೂರು ದಿನ ವೈದ್ಯರು ಇಲ್ಲಿಗೆ ಬರಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ಬಾಲಕನ ಸಾವು ಡೇಂಘೀದಿಂದ ಎಂದು ಶಂಕಿಸಲಾಗಿತ್ತು, ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ತಾಲೂಕು ಆರೋಗ್ಯಾಧಿಕಾರಿ ಡಾ ಸತೀಶ್, ಬಾಲಕ ಸಾವನ್ನಪ್ಪಿರುವುದು ಅನಿಮಿಯಾ ಮತ್ತು ಸಿಸಿಎಫ್ನಿಂದಲೆ ಹೊರತು ಡೇಂಘೀಯಿಂದಲ್ಲ, ಅನಾವಶ್ಯಕ ಆತಂಕ ಬೇಡ, ಮುಂದೆ ವಾರಕ್ಕೆ 3 ದಿನ ಸೇವೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ವರ್ತಕರು ಸ್ವಯಂಪ್ರೇರಿತರಾಗಿ ಗ್ರಾಮದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರು. ಗ್ರಾಮದಲ್ಲಿ ಶೋಕದ ಛಾಯೆ ಮೂಡಿತ್ತು.