ಮದ್ಯದಂಗಡಿ ವಿರೋಧ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.25
ನಗರದ ಮಿಳಘಟ್ಟ ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯದಂತೆ ಕ್ರಮಕೈಗೊಳ್ಳಬೇಕು ಎಂದು ದಸಂಸ, ಕರ್ನಾಟಕ ಜನಜಾಗೃತಿ, ಪರಿಸರ ಸಂರಕ್ಷಣೆ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.
ಮಿಳಘಟ್ಟ ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಧರ್ಮ, ಜಾತಿ ಜನಾಂಗದವರು ವಾಸಿಸುತ್ತಿದ್ದಾರೆ. ಅವರಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಬಡ ವರ್ಗಕ್ಕೆ ಸೇರಿದವರಾಗಿದ್ದು, ಅಬಕಾರಿ ಇಲಾಖೆ ಬಡಾವಣೆಯಲ್ಲಿನ ಮುಖ್ಯರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಎಂಎಸ್ಐಎಲ್ನ ಸಗಟು ಮದ್ಯ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಿರುವುದು ಖಂಡನೀಯ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ವ್ಯಾಪಕ ವಿರೋಧ: ಪ್ರಸ್ತುತ ಮದ್ಯದಂಗಡಿ ಸ್ಥಾಪನೆಗೆ ಅನುಮತಿ ನೀಡಿರುವ ಸ್ಥಳದ ಅಕ್ಕ- ಪಕ್ಕ ಸರ್ಕಾರಿ ಶಾಲೆಗಳು, ದೇವಾಲಯಗಳು, ಸಾರ್ವಜನಿಕ ಆಸ್ಪತ್ರೆಯಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿ ತೆರೆಯಲು ಅವಕಾಶ ನೀಡುತ್ತಿರುವುದು ಸರಿಯಲ್ಲ. ಇದರಿಂದ ಮದ್ಯವಸನಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಅಲ್ಲದೇ ಕೂಲಿ ಕಾರ್ಮಿಕರು ದುಡಿದ ಹಣವನ್ನು ಮದ್ಯಕ್ಕೆ ವ್ಯಯಮಾಡುತ್ತಾರೆ. ಇದರಿಂದ ಮದ್ಯದಂಗಡಿಯ ಲೈಸೆನ್ಸ್ ರದ್ದು ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಈ ರಸ್ತೆಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದರಿಂದ ಮದ್ಯದಂಗಡಿ ತೆರಯುವ ಅಗತ್ಯವಿಲ್ಲ. ಅಲ್ಲದೇ, ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುವುದರಿಂದ ಸಾಕಷ್ಟು ಸಮಸ್ಯೆಗಳು ತಲೆದೊರುವ ಸಾಧ್ಯತೆಗಳಿವೆ. ಮದ್ಯವಸನಿಗಳು ಹೆಚ್ಚಾಗುವುದರಿಂದ ಮಹಿಳೆಯರು, ಮಕ್ಕಳು ಓಡಾಡುವುದು ದುಸ್ತರವಾಗುತ್ತದೆ.ಪುಂಡ-ಪೋಕರಿಗಳಿಂದ ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಡಿಸಿಗೆ ಸಂಘಟನೆಯ ಅಧ್ಯಕ್ಷರು ಆಗ್ರಹಿಸಿದ್ದಾರೆ.