ರೈಲಿಗೆ ಸಿಲುಕಿ ಮಹಿಳೆ ಸಾವು
ಭದ್ರಾವತಿ: ಪಟ್ಟಣದ ಲೋಯರ್ ಹುತ್ತಾದ ಬಳಿ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಮರಣ ಹೊಂದಿದ್ದಾರೆ. ಪಟ್ಟಣದ ಮೀನುಗಾರರ ಬೀದಿಯ ಕೃಷ್ಣಸಿಂಗ್ ಕಾಪೌಂಡ್ ವಾಸಿ ಶಾಂತಿ (45) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಹುತ್ತಾ ಲೆವೆಲ್ ಕ್ರಾಸಿಂಗ್ ಬಳಿ ಘಟನೆ ನಡೆದಿದೆ. ಭದ್ರಾವತಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದಾರೆಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಮಾನಭಂಗ: ಕೊಲೆ ಬೆದರಿಕೆ
ಯುವತಿಯೋರ್ವಳನ್ನು ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ, ನಂತರ ವಿವಾಹವಾಗಲು ನಿರಾಕರಿಸಿ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಸತೀಶನ ವಿರುದ್ಧ ಯುವತಿ ನೀಡಿದ ದೂರಿನನ್ವಯ ಹಳೇನಗರ ಪೊಲೀಸರು ಸತೀಶ ಎಂಬ ಯುವಕನನ್ನು ಬಂಧಿಸಿ ಮಾನಭಂಗ ಮತ್ತು ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ.
ಬ್ಯಾಂಕಿಗೆ ವಂಚನೆ
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ 3,83,200 ಸಾಲವಾಗಿ ಪಡೆದಿದ್ದು, ಇದುವರೆಗೆ ಅಸಲು ಮತ್ತು ಬಡ್ಡಿಯನ್ನು ಪಾವತಿ ಮಾಡದೆ ವಂಚಿಸಿದ್ದಕ್ಕಾಗಿ ಬ್ಯಾಂಕು ಹೊಸಮನೆ ಶಿವಾಜಿ ವೃತ್ತದ ಪೊಲೀಸರಲ್ಲಿ ದೂರು ನೀಡಿದ ಮೇರೆಗೆ ಪೊಲೀಸರು ಹೆಂಚನಸಿದ್ದಾಪುರ ವಾಸಿ ಹನುಮಂತಪ್ಪ ಎಂಬವರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಹನುಮಂತಪ್ಪ ತಾವು ಪಡೆದ ಸಾಲಕ್ಕೆ ತಮ್ಮ ಜಮೀನನ್ನು ಆಧಾರ ಮಾಡಿಕೊಟ್ಟಿದ್ದು ಬ್ಯಾಂಕಿನ ಗಮನಕ್ಕೆ ತಾರದೆ ಅದನ್ನು ಅಕ್ರಮವಾಗಿ ನಾಗರತ್ನ ಎಂಬವರಿಗೆ ದಾನ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಲ: ವ್ಯಕ್ತಿ ಆತ್ಮಹತ್ಯೆ
ಶಿರಾಳಕೊಪ್ಪ: ಸಾಲ ಪಡೆದ ವ್ಯಕ್ತಿ ಅದನ್ನು ತೀರಿಸಲಾಗದೇ ಮನನೊಂದು ನೇಣಿಗೆ ಶರಣಾದ ಘಟನೆ ಶಿರಾಳಕೊಪ್ಪ ಹತ್ತಿರದ ತಡಗಣಿ ಗ್ರಾಮದ ಹೊರವಲಯದ ವಿಶ್ವನಾಥ ಎಂಬುವವರ ಗದ್ದೆಯಲ್ಲಿದ್ದ ನಡೆದಿದೆ.
ಮೃತ ವ್ಯಕ್ತಿ ತಡಗಣಿ ಗ್ರಾಮದ ಆಂಜನೇಯ (42) ಎಂದು ತಿಳಿದು ಬಂದಿದೆ. ಕಳೆದ ಕೆಲಸಮಯದಿಂದ ಚಿಕ್ಕಪುಟ್ಟ ಸಾಲ ಮಾಡಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ನೇಣು ಹಾಕಿಕೊಂಡಿದ್ದಾಗಿ ತಿಳಿದು ಬಂದಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.