ಆಗಸ್ಟ್ ಮೊದಲ ವಾರದಲ್ಲಿ ಉತ್ಪಾದನೆ ಪ್ರಾರಂಭ
ಕ.ಪ್ರ.ವಾರ್ತೆ ಶಿಕಾರಿಪುರ, ಜೂ.26
ತಾಲೂಕಿನ ಸಂಡ ಗ್ರಾಮದ ಕೈಗಾರಿಕಾ ವಲಯದಲ್ಲಿನ ಬೃಹತ್ ಪಶು ಆಹಾರ ಘಟಕದ ಉತ್ಪಾದನೆಯನ್ನು ಆಗಸ್ಟ್ ಮೊದಲ ವಾರದಲ್ಲಿ ಆರಂಭಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಯಡಿಯೂರಪ್ಪ ತಿಳಿಸಿದರು.
ಬುಧವಾರ ಸಂಡ ಗ್ರಾಮದ ಕೈಗಾರಿಕಾ ಪ್ರದೇಶಕ್ಕೆ ತೆರಳಿ ಕಾಮಗಾರಿಯ ಗುಣಮಟ್ಟ ಸಹಿತ ಶೀಘ್ರ ಉತ್ಪಾದನೆಯ ಆರಂಭಕ್ಕೆ ಅಧಿಕಾರಿಗಳ ಜತೆ ಚರ್ಚಿಸಿ ನಂತರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸರ್ಕಾರದ ವತಿಯಿಂದ ರು. 45 ಕೋಟಿ ಅನುದಾನದ ಮೂಲಕ ಗ್ರಾಮದಲ್ಲಿ 30 ಎಕರೆ ಪ್ರದೇಶದಲ್ಲಿ ಕೆಎಂಎಫ್ ವತಿಯಿಂದ ಆರಂಭವಾಗಿರುವ ಬೃಹತ್ ಪಶು ಆಹಾರ ಘಟಕ ಉತ್ಪಾದನೆಯನ್ನು ಆರಂಭಿಸುವ ಅಂತಿಮ ಹಂತ ತಲುಪಿದೆ ಎಂದರು.
ಉತ್ತಮ ಬೆಲೆ: ನಿತ್ಯ 200 ಮೆ.ಟನ್ ಮೆಕ್ಕೆಜೋಳ,100 ಮೆ.ಟನ್ ಬೂಸಾ ಮತ್ತಿತರ ಕಚ್ಚಾಸಾಮಗ್ರಿ ಅವಶ್ಯಕವಾಗಿರುವ ಘಟಕಕ್ಕೆ ವರ್ಷಕ್ಕೆ 72 ಸಾವಿರ ಮೆ.ಟನ್ ಮಕ್ಕೆಜೋಳ ಅನಿವಾರ್ಯವಾಗಿದೆ. ಇದರಿಂದಾಗಿ ಸಮೀಪದಲ್ಲಿ ಜೋಳ ಬೆಳೆದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ ಎಂದರು.
ಘಟಕದ ಆರಂಭದಿಂದ ಸ್ಥಳೀಯ ಹೈನುಗಾರಿಕೆ ಅವಲಂಬಿಸಿರುವ ರೈತರಿಗೆ ಪಶು ಆಹಾರ ಕ್ವಿಂಟಲ್ಗೆ ರು. 100 ಕಡಿತವಾಗುವ ಸಾಧ್ಯತೆ ಇದೆ ಎಂದ ಅವರು ವಾರ್ಷಿಕ ರು. 5,000 ಮೇಲ್ಪಟ್ಟು ಉಳಿತಾಯವಾಗಲಿದೆ ಎಂದರು.
ಜುಲೈ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ಉತ್ಪಾದನೆ: ಆಗಸ್ಟ್ ಮೊದಲ ವಾರದಲ್ಲಿ ಸ್ಥಳೀಯ ರೈತರು ಘಟಕದಿಂದ ಉತ್ಪಾದನೆ ಪಡೆಯಬಹುದಾಗಿದೆ ಎಂದರು. ಘಟಕ ಹಾಗೂ ಸಮೀಪದ ಗ್ರಾಮಗಳಿಗೆ ಅಗತ್ಯವಾದ ವಿದ್ಯುತ್ ಗಾಗಿ ಗ್ರಾಮದಲ್ಲಿ ರು. 8 ಕೋಟಿ ವೆಚ್ಚದ 110 ಕೆ.ವಿ ಉಪಕೇಂದ್ರ ಶೀಘ್ರ ನಿರ್ಮಾಣವಾಗಿ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದರು.
ಶಿಮುಲ್ ಅಧ್ಯಕ್ಷ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ 2.75 ಲಕ್ಷ ನಿತ್ಯ ಉತ್ಪಾದನೆಯ ಹಾಲು ಯಡಿಯೂರಪ್ಪನವರು ಜಾರಿಗೊಳಿಸಿದ ರು. 2 ಪ್ರೋತ್ಸಾಹ ಧನದಿಂದ ಇದೀಗ 3.5 ಲಕ್ಷಕ್ಕೆ ಏರಿಕೆಯಾಗಿದೆ ಎಂದ ಅವರು ನಂತರದಲ್ಲಿನ ಏರಿಕೆಯಿಂದಾಗಿ 4 ಲಕ್ಷ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಅಕ್ಕಿ, ಸ್ಥಳೀಯ ಅಭಿಯಂತರ ಕೆ.ಜಿ ಕುಮಾರ್, ಎಜಿಎಂ ನಾಗರಾಜ್, ತಹಸೀಲ್ದಾರ್ ಗಣಾಚಾರಿ, ಮುಖಂಡ ಗುರುಮೂರ್ತಿ, ರುದ್ರಪ್ಪಯ್ಯ, ಚನ್ನವೀರಪ್ಪ, ವಸಂತಗೌಡ,ನಾಗರಾಜಪ್ಪ, ಸುಕೇಂದ್ರಪ್ಪ, ಹಾಲಪ್ಪ ಮೊದಲಾದವರು ಉಪಸ್ಥಿತರಿದ್ದರು.
ಮನವಿ: ಶಿಕಾರಿಪುರ ತಾಲೂಕಿನ ಸಂಡ ಗ್ರಾಮದಲ್ಲಿನ ಕೆ.ಎಂ.ಎಫ್ನ ಬೃಹತ್ ಪಶು ಆಹಾರ ಘಟಕದಲ್ಲಿ ಹಲವು ಉದ್ಯೋಗಾವಕಾಶ ಲಭ್ಯವಿದ್ದು, ಕೇವಲ ಸಹಕಾರಿ ಕಾಯ್ದೆಯಡಿ ಮತ್ತು ಘಟಕ ಸ್ಥಾಪನೆಗೆ ಜಮೀನು ನೀಡಿದ ರೈತರಿಗೆ ಆದ್ಯತೆ ಮೇರೆಗೆ ನೀಡಲಾಗುವುದು. ಮಧ್ಯವರ್ತಿಗಳ ಜಾಲಕ್ಕೆ ಸಿಲುಕಿ ಬಡ ನಿರುದ್ಯೋಗಿಗಳು ತೊಂದರೆ ಅನುಭವಿಸದಂತೆ ಅವರು ಮನವಿ ಮಾಡಿದರು.