ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಒಕ್ಕಲೆಬ್ಬಿಸ ಬೇಡಿ: ಅಧಿಕಾರಿಗಳಿಗೆ ಸೂಚನೆ

Lingaraj Badiger
Updated On : 27 Jun 2013, 10:46 am

ಕ.ಪ್ರ.ವಾರ್ತೆ, ಶಿಕಾರಿಪುರ, ಜೂ.26
ತಾಲೂಕಿನ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮತ್ತಿತರ ಕಾರಣದಿಂದಾಗಿ ಕಳೆದ ಕೆಲ ತಿಂಗಳಿನಿಂದ ತಾಲೂಕಿನ ಪ್ರಗತಿಯಲ್ಲಿ ಸಹಜವಾಗಿ ಕುಂಟಿತವಾಗಿದ್ದು ಚುನಾವಣೆ ನಂತರದಲ್ಲಿನ ರಾಜಕೀಯ ಬದಲಾವಣೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿದೆ ಎಂದರು.
ಅಧಿಕಾರಿಗಳಿಗೆ ತಾಳ್ಮೆ ಅಗತ್ಯ: ಸರ್ಕಾರಿ ಅಧಿಕಾರಿಗಳು ಹೆಚ್ಚು ತಾಳ್ಮೆ ಹಾಗೂ ಕಾಳಜಿಯಿಂದ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ತಾಲೂಕಿನ ಪ್ರತಿ ಇಲಾಖೆಯ ಮೂಲಕ ಸರ್ಕಾರದಿಂದ ಮಂಜೂರಾದ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ಪೂರ್ವ ತಾಲೂಕಿನ ಅಗತ್ಯ ಕಾಮಗಾರಿಗಳ ಮಂಜೂರಾತಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಪಿಡಿಯನ್ನು ಸಿದ್ದಪಡಿಸಿಕೊಂಡು ಕೂಡಲೇ ನೀಡುವಂತೆ ಸೂಚಿಸಿದರು.
ಗುಣಮಟ್ಟಕ್ಕೆ ಆದ್ಯ ನೀಡಿ: ಜಿ.ಪಂ, ತಾ.ಪಂ, ಲೋಕೋಪಯೋಗಿ, ಪುರಸಭೆ ಮತ್ತಿತರ ಇಲಾಖೆಯ ಬೃಹತ್ ಕಾಮಗಾರಿಗಳು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ತಿಳಿಸಿದ ಅವರು, ಕಳಪೆ ಕಾಮಗಾರಿಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕಾಲಕಾಲಕ್ಕೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆಯನ್ನು ಕೈಗೊಳ್ಳುವಂತೆ ತಿಳಿಸಿದರು.
ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಗುತ್ತಿಗೆದಾರನಿಗೆ ಹಣ ಪಾವತಿಸದಂತೆ ತಿಳಿಸಿದ ಅವರು, ಈ ರೀತಿಯ ಕಳಪೆ ಕಾಮಗಾರಿಗೆ ಅಧಿಕಾರಿಗಳನ್ನು ಜವಾಬ್ಧಾರರನ್ನಾಗಿಸುವುದಾಗಿ ಎಚ್ಚರಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿತ್ಯ ಸರ್ಕಾರಿ ಬಸ್ ಚಾಲಕರಿಗೆ ಕಿರುಕುಳ ಉಂಟಾಗುತ್ತಿದ್ದು, ಈ ದಿಸೆಯಲ್ಲಿ ಹಿಂಭಾಗದಲ್ಲಿನ ಕೃಷಿ ಇಲಾಖೆಯನ್ನು ಸ್ಥಳಾಂತರಗೊಳಿಸಿ ವಿಶಾಲ ರಾಜ್ಯ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿ ಸಮೀಪದ ನೂತನ ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಕೃಷಿ ಇಲಾಖೆಗೆ ಅವಶ್ಯಕವಾದ ಕಚೇರಿಯನ್ನು ಗುರುತಿಸಿಕೊಳ್ಳಲು ಅವರು ಸಲಹೆ ನೀಡಿದರು.
3.40 ಕೋಟಿ ಪ್ರೋತ್ಸಾಹ ಧನ: ನಂತರದಲ್ಲಿ ಸುವರ್ಣ ಭೂಮಿ ಯೋಜನೆಯಲ್ಲಿ ತಾಲೂಕಿನ ರೈತರಿಗೆ 3.40 ಕೋಟಿ ಪ್ರೋತ್ಸಾಹ ಧನ ಖಾತೆಗೆ ನೇರವಾಗಿ ಸಂದಾಯವಾಗಿದ್ದು, ಯೋಜನೆಯ ಬಗ್ಗೆ ರೈತ ವರ್ಗ ಅತೀವ ಸಂತಸಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಭಾಕರ್ ತಿಳಿಸಿದರು.
ರೋಟರೇಟರ್ ಮ್ತತ್ತಿತರ ಲಕ್ಷಾಂತರ ವೆಚ್ಚದ ಕೃಷಿ ಪರಿಕರಕ್ಕೆ ಈ ಹಿಂದೆ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದ್ದು ಇದೀಗ ಖರೀದಿಸಿದ ನಂತರದಲ್ಲಿ ಸಬ್ಸಿಡಿ ಪಾವತಿಸುವ ನೂತನ ಯೋಜನೆ ಬಡ ಸಾಮಾನ್ಯ ಜನತೆಯ ಸಹಿತ ಪರಿಶಿಷ್ಟ ಜಾತಿ ಪಂಗಡದ ಜನತೆಗೆ ತೀವ್ರ ರೀತಿಯಲ್ಲಿ ಸಮಸ್ಯೆಯಾಗಿದ್ದು ಮೂಲ ಯೋಜನೆಯನ್ನು ಮುಂದುವರಿಸಲು ಸರ್ಕಾರಕ್ಕೆ ಮನವರಿಕೆಗೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ, ಜಿ.ಪಂ ಸಿಇಒ ಸಶಿಕಾಂತ್ ಸೆಂಥಿಲ್, ತಹಸೀಲ್ದಾರ್ ಗುಣಾಚಾರಿ, ತಾ.ಪಂ ಅಧ್ಯಕ್ಷ ಹನುಮಂತಪ್ಪ, ಉಪಾದ್ಯಕ್ಷೆ ಸರೋಜಮ್ಮ, ಇಒ ಡಾ.ಚಂದ್ರಶೇಖರ್, ಜಿ.ಪಂ ಸದಸ್ಯ ಬಂಗಾರಿನಾಯ್ಕ, ಈಶ್ವರಪ್ಪ, ಗುರುಮೂರ್ತಿ, ಸುಕೇಂದ್ರಪ್ಪ, ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement