ಕುವೆಂಪು ವಿವಿ ದೂರಶಿಕ್ಷಣ ಎಂಫಿಲ್ ಇಲ್ಲ: ಸ್ಪಷ್ಟನೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ದೂರಶಿಕ್ಷಣ ಮೂಲಕ ಎಂ.ಫಿಲ್ ಕೋರ್ಸ್ ನಡೆಸುತ್ತಿಲ್ಲವಾದ್ದರಿಂದ ಎಂ.ಫಿಲ್ ಪದವಿ ಪ್ರಮಾಣಪತ್ರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2008ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ರಾಜ್ಯಾದ್ಯಂತ 2,550 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇವರಲ್ಲಿ ಸುಮಾರು 184 ಉಪನ್ಯಾಸಕರು ದೂರಶಿಕ್ಷಣ ಮೂಲಕ ಎಂ.ಫಿಲ್ ಮಾಡಿದವರು ಇದ್ದಾರೆ. ಇವರಲ್ಲಿ 53 ಉಪನ್ಯಾಸಕರು ನೇಮಕ ಪ್ರಕ್ರಿಯೆ ನಿಯಮಗಳನ್ನು ಪೂರೈಸಿಲ್ಲ. ಇವರು ವಿನಾಯಕ ಮಿಷನ್ ವಿವಿ, ಪೆರಿಯಾರ್ ವಿವಿ, ಮಧುರೈ ಕಾಮರಾಜ್ ವಿವಿ, ಭಾರತೀದಾಸನ್ ವಿವಿ, ಅಣ್ಣಾಮಲೈ ವಿವಿ, ಕುವೆಂಪು ವಿವಿಯಿಂದ ಎಂ.ಫಿಲ್ ಪದವಿಯ ಪ್ರಮಾಣಪತ್ರ ಪಡೆದಿದ್ದಾರೆ. ಆದ್ದರಿಂದ ನೇಮಕ ರದ್ದುಗೊಳಿಸಬೇಕು ಎಂದು ಕೋರಿ ಆಕಾಂಕ್ಷಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಆದರೆ ದೂರಶಿಕ್ಷಣ ಪದವಿ ಉಪನ್ಯಾಸಕ ಹುದ್ದೆಗೆ ಅರ್ಹತೆ ಅಲ್ಲ ಎಂದು ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ತೀರ್ಪು ಕಾಯ್ದಿರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕುವೆಂಪು ವಿವಿ ಕುಲಸಚಿವರು ಪ್ರಕಟಣೆ ನೀಡಿದ್ದಾರೆ.