ನೀರು ಪೂರೈಕೆದಾರರಿಗೆ ಅಭಿನಂದನೆ ಸಲ್ಲಿಸಿದ ನಗರಸಭೆ
ಕ.ಪ್ರ.ವಾರ್ತೆ, ಸಾಗರ, ಜೂ.26
ಇಲ್ಲಿನ ನಗರಸಭೆ ಪೌರಸೇವಾ ನೌಕರರ ಸಂಘ ಏರ್ಪಡಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ನಗರದ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಿದ ನಗರಸಭೆ ಸಿಬ್ಬಂದಿ ಹಾಗೂ ಟ್ಯಾಂಕರ್, ಟ್ಯಾಕ್ಟರ್ ಮಾಲೀಕರು, ಚಾಲಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ನಗರಸಭೆ ಆಯುಕ್ತ ಕೆ.ನರಸಿಂಹಮೂರ್ತಿ ಮಾತನಾಡಿ, ನಲ್ಲಿ ನೀರು ನಿಲ್ಲಿಸಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಸವಾಲಿನ ಕೆಲಸವಾಗಿತ್ತು. ಆದರೆ ಎಲ್ಲರ ಸಹಕಾರದಿಂದ ತೊಂದರೆ ಆಗದಂತೆ ನೀರು ಪೂರೈಸಲು ಸಾಧ್ಯವಾಯಿತು ಎಂದರು.
ಸುಮಾರು 85 ದಿನಗಳ ಕಾಲ 14 ಟ್ಯಾಂಕರ್ ಹಾಗೂ 16 ಟ್ಯಾಕ್ಟರ್ ಮೂಲಕ 31 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗಿದೆ. ಪ್ರತಿದಿನ 10 ಲಕ್ಷ ಲೀ. ನೀರು ಸರಬರಾಜು ಮಾಡಿದ್ದು ಸುಮಾರು 70 ಲಕ್ಷ ರು. ಖರ್ಚು ತಗುಲಿದೆ. ಜಿಲ್ಲಾಧಿಕಾರಿಗಳ ಬರ ನಿರ್ವಹಣಾ ನಿಧಿಯಿಂದ 33 ಲಕ್ಷ ರು. ಬಿಡುಗಡೆಯಾಗಿದ್ದು, ಸದ್ಯದಲ್ಲಿಯೆ ಉಳಿದ ಹಣ ಬಿಡುಗಡೆ ಆಗಲಿದೆ. ಸಮರ್ಪಕ ನೀರು ವಿತರಣೆಗಾಗಿ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಬಸವನಹೊಳೆ ಡ್ಯಾಮಿನ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸಲಾಗಿದೆ. ಡ್ಯಾಂನ ಆಳವನ್ನು ಹೆಚ್ಚಿಸಿದ್ದರಿಂದ ಹಿಂದಿನ ಮಟ್ಟಕ್ಕಿಂತ ಇನ್ನು ಒಂದು ತಿಂಗಳಿಗೆ ನೀರು ಸಂಗ್ರಹಿಸುವ ಸಾಮರ್ಥ್ಯ ವೃದ್ಧಿಯಾಗಿದೆ. ಜಲಮಂಡಳಿ ನಿರ್ದೇಶನದಂತೆ ನೀರು ಶುದ್ಧೀಕರಣ ಘಟಕವನ್ನು ಸುಮಾರು 18 ಲಕ್ಷ ರು. ವೆಚ್ಚದಲ್ಲಿ ನಗರಸಭೆ ಖರ್ಚಿನಲ್ಲಿ ದುರಸ್ತಿ ಮಾಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಕೆ.ನಾಗಪ್ಪ, ರಾಜ್ಯದಲ್ಲಿ ಮುಧೋಳ ಹಾಗೂ ಸಾಗರ ನಗರದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಜನರಿಗೆ ಸಮರ್ಪಕ ನೀರು ಪೂರೈಕೆ ಮಾಡುವಲ್ಲಿ ಸುಮಾರು 100 ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗಲೂ ಅದನ್ನು ಗಂಭೀರವಾಗಿ ಪರಿಗಣಿಸದೆ ಅವರು ನಿರ್ವಹಿಸಿರುವ ಕಾರ್ಯ ಅಭಿನಂದನೀಯ ಎಂದು ಹೇಳಿದರು. ಪರಿಸರ ಅಭಿಯಂತರ ಪ್ರಭಾಕರ್, ಶಿವಮೂರ್ತಿ, ನೀರು ಪೂರೈಕೆ ವಿಭಾಗದ ಕಿರಿಯ ಅಭಿಯಂತರ ರಾಮಪ್ಪ ಇದ್ದರು.