ಪದವಿ ಕಾಲೇಜು ಸ್ಥಾಪನೆಗೆ ಅನುಮೋದನೆ
ಸಾಗರ: ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದ್ದು 2013-14ನೇ ಶೈಕ್ಷಣಿಕ ವರ್ಷದಿಂದಲೇ ಕಾಲೇಜನ್ನು ಆರಂಭಿಸಲಾಗುವುದು ಎಂದು ನಗರಸಭೆ ಸದಸ್ಯ ತೀ.ನ. ಶ್ರೀನಿವಾಸ್ ಹೇಳಿದರು.
ಕಾಲೇಜು ಸ್ಥಾಪನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಜೂ. 24ರಂದು ಆದೇಶ ಜಾರಿಯಾಗಿದೆ. ಹಾಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿಯೇ ಪದವಿ ತರಗತಿಗಳನ್ನು ಆರಂಭಿಸಲಿದ್ದು ಇನ್ನು ಮೂರು-ನಾಲ್ಕು ದಿನಗಳಲ್ಲಿ ಪ್ರವೇಶಾತಿ ಪ್ರಾರಂಭಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿರ್ಮಾಣಕ್ಕೆ ಚಾಲನೆ: ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಹಿಂದಿನಿಂದಲೂ ಸಾರ್ವಜನಿಕರು, ಸಂಘಸಂಸ್ಥೆಗಳು ಹೋರಾಟ ಮಾಡಿದ್ದರು. ಈಗ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಆಸಕ್ತಿಯಿಂದಾಗಿ ಕಾಲೇಜು ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡಲು ರಾಮನಗರದ ಸರ್ವೇ ನಂ. 64 ಹಾಗೂ 65ರಲ್ಲಿ 40 ಎಕರೆ ಜಾಗವನ್ನು ಗುರುತಿಸಲಾಗಿದೆ. ಹಿಂದಿನ ನಗರಸಭೆ ಅವಧಿಯಲ್ಲಿ ಆಶ್ರಯ ನಿವೇಶನ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ದೂರುಗಳಿದ್ದು, ನಗರಸಭೆ ಆಡಳಿತ ಜಾರಿಗೆ ಬಂದ ತಕ್ಷಣ ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.
2 ಕೋಟಿ ರು. ವೆಚ್ಚ: ಗಣಪತಿ ಕೆರೆ ಮೇಲ್ಭಾಗದಲ್ಲಿ 10 ಕೋಟಿ ರು. ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. 2 ಕೋಟಿ ರು. ವೆಚ್ಚದಲ್ಲಿ ಗಣಪತಿ ದೇವಸ್ಥಾನವನ್ನು ಗರ್ಭಗುಡಿ ಹೊರತುಪಡಿಸಿ ಇತರೆ ಭಾಗಗಳ ಅಭಿವೃದ್ಧಿಗೆ ಕಾರ್ಕಳದ ಶಿಲ್ಪಿಯೊಬ್ಬರೊಂದಿಗೆ ಚರ್ಚೆ ನಡೆಸಲಾಗಿದ್ದು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಗಣಪತಿ ಕೆರೆಯ ಒತ್ತುವರಿ ತೆರವುಗೊಳಿಸಿದ ನಂತರ ಅದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ತ್ಯಾಜ್ಯ ವಿಲೇವಾರಿ ಘಟಕ: ಸಂಗಳದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಕುಂಠಿತಗೊಂಡಿದ್ದು ಅದನ್ನು ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಬಸ್ಸು ನಿಲ್ದಾಣದ ಪಕ್ಕದಲ್ಲಿಯೆ ಖಾಸಗಿ ಬಸ್ಸು ನಿಲ್ದಾಣ ನಿರ್ಮಾಣದ ಕುರಿತು ಸಾರ್ವಜನಿಕರ ಆಶಯಕ್ಕೆ ಪೂರಕವಾಗಿ ನಗರಸಭೆಯ ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಎನ್. ಲಲಿತಮ್ಮ, ಡಿಶ್ ಗುರು, ಸುಂದರಸಿಂಗ್, ಪರಿಮಳ, ಜಿ.ಕೆ. ಭೈರಪ್ಪ, ಎನ್. ಶ್ರೀನಾಥ್, ಅನ್ವರ್, ರವಿ ಜಂಬೂರುಮನೆ, ಗಣಾಧೀಶ್, ಸಬಾನ ಇದ್ದರು.