ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬದಲಾಗಬೇಕಾದ ವ್ಯವಸ್ಥೆಗೆ ಸಲಹೆ: ಎಸ್ಪಿ

Lingaraj Badiger
Updated On : 27 Jun 2013, 10:53 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.26
ಮಣಿಪಾಲ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದ್ದು, ಬದಲಾಗಬೇಕಾದ ವ್ಯವಸ್ಥೆ ಮತ್ತು ಅಗತ್ಯತೆಗಳ ಕುರಿತು ರಕ್ಷಣಾ ಇಲಾಖೆಗೆ ಗಂಭೀರ ಸಲಹೆಗಳನ್ನು ನೀಡಿವೆ.
ನಗರದ ಡಿಎಆರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಆಯೋಜಿಸಿದ್ದ ಜಿಲ್ಲೆಯ ವಿಶ್ವವಿದ್ಯಾನಿಲಯ ಹಾಗೂ ಎಲ್ಲ ಕಾಲೇಜು ಮತ್ತು ವಸತಿ ನಿಲಯಗಳ ಮುಖ್ಯಸ್ಥರ ಸಭೆಯಲ್ಲಿ ಸಾಕಷ್ಟು ಸಲಹೆಗಳು ಹರಿದು ಬಂದವು.
ಆಪ್ತ ಸಮಾಲೋಚನೆ: ಜಿಲ್ಲೆಯ ವಸತಿ ನಿಲಯಗಳು, ಕಾಲೇಜಿನ ಹೊರ ಆವರಣದಲ್ಲಿ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ, ಬಸ್ ನಿಲ್ದಾಣಗಳಲ್ಲಿನ ಕಿರುಕುಳ ತಡೆಗಟ್ಟುವಿಕೆ, ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಕಾರ್ಯಾಗಾರ ಮಾಡುವುದು, ಪ್ರತಿ ಕಾಲೇಜು ಬಳಿ ಪೊಲೀಸರು ಗಸ್ತು ತಿರುಗುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಸೇರಿದಂತೆ ಮತ್ತಿತರ ಸಲಹೆಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಅವರಿಗೆ ಕಾಲೇಜು, ವಸತಿ ನಿಲಯ ಮುಖ್ಯಸ್ಥರು ನೀಡಿದರು.
ಪರಿಹರಿಸಬಹುದು: ಸಾಗರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಅಶೋಕ ಡಿ. ರೇವಣಕರ್ ಮಾತನಾಡಿ, ನಮ್ಮ ಕಾಲೇಜಿನ ಹೊರ ಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು 2-3 ಬಾರಿ ಭೇಟಿ ನೀಡಿದರೆ ಸಮಸ್ಯೆ ಪರಿಹರಿಸಬಹುದು ಎಂದರು.
ಹೊಳೆಹೊನ್ನೂರು ಕಾಲೇಜಿನ ಪ್ರಾಂಶುಪಾಲ ಡಾ. ಜಯಂತಿ, ನಮ್ಮ ಕಾಲೇಜಿನಲ್ಲಿ ಶೇ.75 ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಕಾಲೇಜು ನಗರ ಪ್ರದೇಶದಿಂದ ಒಂದೆರಡು ಕಿಲೋ ಮೀಟರ್ ದೂರ ಇರುವುದರಿಂದ ಶಿವಮೊಗ್ಗ- ಚಿತ್ರದುರ್ಗ ಮಾರ್ಗವಾಗಿ ಹೋಗುವ ಬಸ್‌ಗಳು ಕಾಲೇಜು ಬಳಿ ನಿಲ್ಲಿಸುವುದಿಲ್ಲ, ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಖಾಸಗಿ ಬಸ್‌ಗಳು ಕಾಲೇಜು ಬಳಿ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು ಹಾಗೂ ಸೆಮಿಸ್ಟರ್ ಪ್ರಾರಂಭವಾಗುವ ಮೊದಲು ಪೊಲೀಸ್ ಇಲಾಖೆಯಿಂದ ಅಪರಾಧ ಮಾಸಾಚರಣೆಯಂತಹ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕೌನ್ಸೆಲಿಂಗ್: ಶಿಕಾರಿಪುರ ಕಾಲೇಜು ಉಪನ್ಯಾಸಕಿ ಡಾ. ಜಯಶ್ರೀ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ನಡುವೆ ಸಂಹವನದ ಅಂತರ ಇದೆ. ಇದನ್ನು ಸರಿಪಡಿಸಿಕೊಳ್ಳಬೇಕು. 2 ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಎರಡು ಇಲಾಖೆಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಬೇಕು. ಮನಃಶಾಸ್ತ್ರರಿಂದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮೆಗ್ಗಾನ್ ವೈದ್ಯಕೀಯ ಮಹಾವಿದ್ಯಾಲಯ ಹಾಸ್ಟೆಲ್ ಮೇಲ್ವಿಚಾರಕಿ ಹೇಮಾ ಮೋಹನ್, ವಿದ್ಯಾನಿಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕು. ರಕ್ಷಣಾ ಸಿಬ್ಬಂದಿಯ ಒಪ್ಪಿಗೆ ಪಡೆದು ಹೊರ ಬರುವಂತೆ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಕುವೆಂಪು ವಿಶ್ವವಿದ್ಯಾನಿಲಯ ಮಹಿಳಾ ಹಾಸ್ಟೆಲ್ ಮೇಲ್ವಿಚಾರಕಿ ಉಮಾ ಹೆಗ್ಡೆ, ಇಂದಿನ ಹೆಣ್ಣು ಮಕ್ಕಳು ಮೊಬೈಲ್ ಇಲ್ಲದೆ ಬದುಕುವ ಸ್ಥಿತಿಯಲ್ಲಿಲ್ಲ. ಅಲ್ಲದೇ ಇವರು ಮೊಬೈಲ್‌ಗಳಿಂದ ಮೇಸೆಜ್ ಮಾಡ್ತಾರೆ, ಅದು ಕೆಟ್ಟ ರೀತಿಯ ಮೇಸೆಜ್‌ಗಳು. ಆದ್ದರಿಂದ ಇದನ್ನು ತಡೆಗಟ್ಟಲು ಸೈಬರ್ ಕ್ರೈಂನ್ನು ಮತ್ತಷ್ಟು ಗಟ್ಟಿಗೊಳಿಸಿ ಈ ಮೂಲಕ ಇಂತಹ ಪ್ರಕರಣಗಳನ್ನು ತಡೆಗಟ್ಟ ಬಹುದು ಎಂದು ಸಲಹೆ ನೀಡಿದರು.
ಸಾರ್ವಜನಿಕರ ಆಹವಾಲುಗಳನ್ನು ಸ್ವೀಕರಿಸಿದ ಎಸ್.ಪಿ. ಕೌಶಲೇಂದ್ರ ಕುಮಾರ್, ಕಾಲೇಜುಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಇಲಾಖೆಯಿಂದ ಸಾಧ್ಯವಿಲ್ಲ. ಅದನ್ನು ಆಯಾ ಕಾಲೇಜುಗಳೇ ಅಳವಡಿಸಿಕೊಳ್ಳಬೇಕು. ಇನ್ನೂ ಮನಃಶಾಸ್ತ್ರಜ್ಞರಿಂದ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ಆಗಬೇಕಿದೆ. ನಮ್ಮ ಇಲಾಖೆ ಸಿಬ್ಬಂದಿಯಿಂದ ಅದು ಸಾಧ್ಯವೋ ಅಥವಾ ಹೊರಗಿನ ನುರಿತ ವ್ಯಕ್ತಿಗಳನ್ನು ಕರೆತಂದು ಕಾರ್ಯಕ್ರಮ ಹಮ್ಮಿಕೊಳ್ಳುವುದೋ ಎಂಬುದನ್ನು ಚರ್ಚಿಸಬೇಕು ಎಂದರು.
ಬಸ್‌ಗಳಲ್ಲಿ ನಡೆಯುವ ದೌರ್ಜನ್ಯ ತಡೆಯಲು ಮುಂದಿನ ದಿನಗಳಲ್ಲಿ ಸಿಟಿ ಬಸ್‌ಗಳಲ್ಲಿ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಸಂಚರಿಸಲಿದ್ದಾರೆ ಎಂದ ಅವರು, ನಮಗಿಂತ ಶಿಕ್ಷಕರಿಗೆ ಕಾಲೇಜಿನ ಹೊರಭಾಗದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುತ್ತದೆ. ಇದನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು. ಅಪರಾಧಗಳ ಬಗ್ಗೆ ಅಥವಾ ಘಟನೆ ಬಗ್ಗೆ ಪೊಲೀಸ್ ಇಲಾಖೆಗೆ ಭಯವಿಲ್ಲದೆ ಮಾಹಿತಿ ನೀಡಬಹುದು.
ಇದರಿಂದ ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂಬ ವಿಶ್ವಾಸವನ್ನೂ ಎಸ್ಪಿ ವ್ಯಕ್ತಪಡಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ
ಶಿವಮೊಗ್ಗ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಜೆಪಿ ಮಹಿಳಾ ಘಟಕದ ಸದಸ್ಯರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಿಳೆಯರ ಸರ ಅಪಹರಣ ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕಾಲೇಜು ಕ್ಯಾಂಪ್‌ಸ್‌ಗಳಲ್ಲಿ ಯುವಕರು ಅತಿ ವೇಗವಾಗಿ ಬೈಕ್ ಓಡಿಸಿ ವಿದ್ಯಾರ್ಥಿನಿಯರಿಗೆ ಕಿರುಕುಳ ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಘಟಕದ ಸದಸ್ಯರು ಒತ್ತಾಯಿಸಿದರು.
ಭ್ರೂಣ ಹತ್ಯೆ ಪ್ರಕರಣ ತಡೆಯುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಬೇಕು ಎಂದ ಘಟಕದ ಸದಸ್ಯರು, ಉಡುಪಿಯ ಮಣಿಪಾಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜ್ಯವೇ ತಲೆತಗ್ಗಿಸುವಂತಹದ್ದು. ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಆರ್ಥಿಕ ನಿಧಿ ಸ್ಥಾಪಿಸಬೇಕು ಎಂದು ಘಟಕದ ಸದಸ್ಯರು ಒತ್ತಾಯಿಸಿದರು.
ಕೆಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಿ. ಮಂಜುಳಾ, ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಪುರುಷೋತ್ತಮ್, ಕಾರ್ಯದರ್ಶಿ ಬಳ್ಳೆಕೆರೆ ಸಂತೋಷ್, ನಗರಸಭೆ ಸದಸ್ಯೆ ಆರ್ಚನಾ ಬಳ್ಳೆಕೆರೆ, ಮಾಲತಿ ಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement