ಕಾಯ್ದೆ ತಿದ್ದುಪಡಿಗೆ ಬಿಜೆಪಿ ವಿರೋಧ; ಸಿದ್ದರಾಮಣ್ಣ
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಜೂ.27
ಕಾಂಗ್ರೆಸ್ ಸರ್ಕಾರ ಕರ್ನಾಟಕ ಪಂಚಾಯತ್ ಅಧಿನಿಯಮ 1993ರ ಕಾಯ್ದೆಗೆ ಗ್ರಾಮಸಭೆ ಮತ್ತು ಗ್ರಾಪಂ ಮಾಸಿಕ ಸಭೆಗಳು ನಿರಂತರವಾಗಿ ನಡೆಯದಿದ್ದಲ್ಲಿ ಅದರ ಹೊಣೆಯನ್ನು ಗ್ರಾಪಂ ಚುನಾಯಿತ ಸದಸ್ಯರ ಮೇಲೆ ಹೊರಿಸಿ ಅವರ ಸದಸ್ಯತ್ವ ರದ್ದುಪಡಿಸುವ ತಿದ್ದುಪಡಿಯನ್ನು ತರಲು ಕ್ರಮ ಕೈಗೊಂಡಿರುವುದನ್ನು ಬಿಜೆಪಿ ವಿರೋಧಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ತಿಳಿಸಿದರು.
ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ವಿರೋಧದ ನಡುವೆಯೂ ಸದರಿ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತರೂ ಈ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ತಿನ ಅನುಮೋದನೆಯೂ ಬೇಕಾಗಿರುತ್ತದೆಂದು ತಿಳಿಸಿದರು.
ಹಕ್ಕು ಮೊಟಕು: ತಿದ್ದುಪಡಿಯು ಗ್ರಾಪಂ ಕಾರ್ಯನಿರ್ವಹಣೆ ಮತ್ತು ಚುನಾಯಿತ ಜನಪ್ರತಿನಿಧಿಗಳ ಮೂಲ ಹಕ್ಕುಗಳನ್ನು ಮೊಟಕುಗೊಳಿಸುವ ದುರುದ್ದೇಶ ಹೊಂದಿದೆ ಎಂದು ಅವರು ಟೀಕಿಸಿದರು.
ತಿದ್ದುಪಡಿ ಮಸೂದೆ ವಿರೋಧಿಸಲು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಕ್ಷೇತ್ರದ ಎಲ್ಲಾ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಸಭೆಯನ್ನು ಜು.7ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಕರೆಯಲಾಗಿದೆ ಎಂದರು.
ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಆಯನೂರು ಮಂಜುನಾಥ್, ವಿಪ ಸದಸ್ಯ ಭಾನುಪ್ರಕಾಶ್, ಕೃಷ್ಣಭಟ್, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಕುಮಾರಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶಪ್ಪ, ಗುರುಸ್ವಾಮಿ, ಪ್ರಚಾರ ಪ್ರಮುಖ್ ಬಿ.ಕೆ. ಶ್ರೀನಾಥ್, ಜಿಲ್ಲಾ ಮಹಿಳಾ ಮೋರ್ಚಾ ನಾಯಕಿ ಆರ್.ಎಸ್.ಶೋಭ, ಪ್ರಕಾಶ್, ಮಂಜುನಾಥ್, ರಮೇಶ ಮೊದಲಾದವರು ಇದ್ದರು.