ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾದಕ ವ್ಯಸನಕ್ಕೆ ಪರಿಸರ ಕಾರಣ

Rashmi Kasaragodu
Updated On : 28 Jun 2013, 11:26 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ.27
ಒಬ್ಬ ವ್ಯಕ್ತಿ ಮಾದಕ ವ್ಯಸನಿಯಾಗಲು ಆತನು ಬೆಳೆದು ಬಂದ ಪರಿಸರ ಕಾರಣವಾಗಬಹುದು ಎಂದು ಡಿವೈಎಸ್ಪಿ ರಾಮಾನಾಯ್ಕ ಹೇಳಿದರು.
ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮಹಿಳಾ ಪೊಲೀಸ್ ಠಾಣೆ, ಆಸರೆ ಸೋಷಿಯಲ್ ಸರ್ವಿಸ್ ಟ್ರಸ್ಟ್, ಶಾಶ್ವತಿ ಮಹಿಳಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿ ತನ್ನ ಪರಿಸರದಿಂದ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಮಾದಕ ದ್ರವ್ಯಗಳಿಗೆ ದಾಸನಾಗುವಂತಹ ಪ್ರವೃತ್ತಿ ಬೆಳೆಯುತ್ತಿರುವುದು ಅತ್ಯಂತ ವಿಷಾದನೀಯ ಎಂದರು.
ಜಾಗೃತಿ ಅಗತ್ಯ: ಇಂದು ಯವಕರು ಹೆಚ್ಚು ಮಾದಕ ವ್ಯಸನಿಗಳಾಗುತ್ತಿದ್ದು, ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ. ಶಾಲಾ ಕಾಲೇಜಿನ ಸುತ್ತ- ಮುತ್ತ ಮಾದಕ ವಸ್ತುಗಳನ್ನು ಮಾರುವುದಾಗಲಿ, ಕೊಳ್ಳುವುದಾಗಲಿ ಕಾನೂನು ಬಾಹಿರ. ಆದರೆ, ಇಂದು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳೇ ಇಂತಹ ಜಾಲದಲ್ಲಿ ಸಿಲುಕಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ಅಭ್ಯಾಸ ಅಂಟಿಸಿಕೊಂಡಿರದ ವಿದ್ಯಾರ್ಥಿಯನ್ನು ನಮ್ಮ ಸಮಾಜ ಕೀಳರಿವೆಯಿಂದ ಕಾಣುವ ಸಂಸ್ಕೃತಿ ಇಂದು ಬೆಳೆದುಕೊಂಡಿದೆ. ಇದನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಇಂತಹ ವಿಷಯದ ವಿರುದ್ಧ ನಿಂತರೆ ಮಾತ್ರ ಮಾದಕವಸ್ತು ವಿರೋಧಿ ದಿನಾಚರಣೆ ಆಚರಿಸುವುದಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.
ವ್ಯಸನಿಗಳ ಮನಪರಿವರ್ತನೆ ಮಾಡುವಂತಹ ಕೆಲಸ ಪ್ರಾರಂಭವಾಗಬೇಕು. ಇಂದಿನ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವಿರಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.
ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭ್ಯಾಗ್ಯಶ್ರೀ, ಜೆ.ಎಸ್. ಅಂಕಿತಾ, ಸೌಮ್ಯ ಅವರಿಗೆ  ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವಿಎಸ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಆಸರೆ ಸೋಷಿಯಲ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಸತೀಶ್ ಗೌಡ, ಶಾಶ್ವತಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತ ಸುರೇಂದ್ರ, ಶಿವಮೊಗ್ಗ ಕೋಟೆ ವೃತ್ತದ ಸಿಪಿಐ ಎಚ್. ಜಯರಾಜ್, ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಕೆ. ನಾಗಮ್ಮ, ಎಂ.ಸಿ. ಮಧು, ಡಿವಿಎಸ್ ಆಡಳಿತ ಮಂಡಳಿ ಖಜಾಂಚಿ ನೀಲಮೇಘಂ, ಪ್ರಾಂಶುಪಾಲ ಸುಧಾಕರ್ ರಾವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement