ಶಿಕ್ಷಣದಿಂದ ಸಮಾಜೋದ್ಧಾರ
ಕ.ಪ್ರ.ವಾರ್ತೆ ಶಿಕಾರಿಪುರ ಜೂ.27 ಶಿಕ್ಷಣದಿಂದ ಮಾತ್ರ ಸಮಾಜದ ಸಂಪೂರ್ಣ ಉದ್ಧಾರ ಸಾಧ್ಯ ಎಂದು ಮನಗಂಡು ಸವಿತಾ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಪ್ರತಿವರ್ಷ ಉಚಿತವಾಗಿ ನೋಟ್ ಪುಸ್ತಕ ಮತ್ತಿತರ ಪರಿಕರ ವಿತರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪರಿಪಾಠ ಎಲ್ಲಾ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ಮಂಗಳವಾರ ಪಟ್ಟಣದ ಸವಿತಾ ಸಮಾಜ, ಸವಿತಾ ಯುವಕ ಸಂಘ, ಸವಿತಾ ವಿವಿಧೋದ್ದೇಶ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಯನಗರದ ವೆಂಕಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಸವಿತಾ ಸಮಾಜದ ಬಡಮಕ್ಕಳು, ಅಂಬೇಡ್ಕರ್ ಶಾಲೆ ಹಾಗೂ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂಠಿತವಾಗಬಾರದು: ಕುಟುಂಬದ ಬಡತನದಿಂದ ಶಿಕ್ಷಣ ಕುಂಠಿತವಾಗಬಾರದು. ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಸದುಪಯೋಗಪಡಿಸಿಕೊಳ್ಳಲು ಸೂಚಿಸಿದ ಅವರು ಬಡ ಮಕ್ಕಳ ಉನ್ನತ ಶಿಕ್ಷಣದ ಕನಸು ಸಾಕಾರಗೊಳ್ಳಲು ಹಲವು ಸಂಘ ಸಂಸ್ಥೆಗಳು ಸಹಕರಿಸಲು ಸಿದ್ಧರಿದ್ದು, ವಿದ್ಯಾರ್ಥಿಗಳು ಅವಕಾಶವನ್ನು ಸದ್ವಿನಿಯೋಗಪಡಿಸಿಕೊಂಡು ಸಮಾಜದ ಆಸ್ತಿಯಾಗಿ ಪರಿವರ್ತನೆಯಾಗಬೇಕಾಗಿದೆ ಎಂದರು.
ಕೇವಲ ವೃತ್ತಿಯ ಮೂಲಕ ಸವಿತಾ ಸಮಾಜದ ಸದಸ್ಯರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಣ ಸಂಗ್ರಹಿಸಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತಿತರ ಪರಿಕರಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ ಎಂದು ಪ್ರಶಂಸಿಸಿದ ಅವರು ಈ ಕಾರ್ಯ ಎಲ್ಲಾ ವರ್ಗದ ಜನತೆಗೆ ಮಾದರಿಯಾಗಿದೆ ಎಂದರು.
ವೃತ್ತಿ ನೈಪುಣ್ಯತೆ: ಮಾಜಿ ಪುರಸಭಾದ್ಯಕ್ಷ ಟಿ.ಎಸ್. ಮೋಹನ್ ಮಾತನಾಡಿ, ವೃತ್ತಿಯಲ್ಲಿ ಕೀಳರಿಮೆ ತೊಡೆದುಹಾಕಿ ಸವಿತಾ ಸಮಾಜದ ಸದಸ್ಯರು ಆಧುನಿಕ ಯಂತ್ರದ ಮೂಲಕ ವೃತ್ತಿ ನೈಪುಣ್ಯತೆ ಸಾಧಿಸಿ, ಕೌಶಲ್ಯ ತರಬೇತಿ ಪಡೆದುಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಯುವಕ ಸಂಘದ ಅಧ್ಯಕ್ಷ ಸಿ.ಎನ್. ನಾಗರಾಜ್ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ಮನೋಹರ್, ಸದಸ್ಯ ಪಾಲಾಕ್ಷಪ್ಪ, ರಂಗಕರ್ಮಿ ಸತೀಶ್ ಗಟ್ಟಿ, ಮುಖಂಡ ಆರ್. ಈಶ್ವರಪ್ಪ, ಟಿ. ಶ್ರೀನಿವಾಸ್, ವಿ. ರಾಮಣ್ಣ, ಜೇಸಿಸ್ ಅಧ್ಯಕ್ಷ ರಾಮಣ್ಣ, ಸಿ.ಎಸ್. ಜಯರಾಜ್, ಸಂತೋಷಕುಮಾರ್ ಹಾಜರಿದ್ದರು.