ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಶಿವಮೊಗ್ಗ: ತೋಟಗಾರಿಕಾ ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಬೆಳೆಯ ಕೊಳೆ ರೋಗ ನಿಯಂತ್ರಣಕ್ಕಾಗಿ ಮೈಲುತುತ್ತ ಖರೀದಿಸುವ ರೈತರಿಗೆ ಸಹಾಯಧನ ನೀಡಲು ಉದ್ದೇಶಿಸಿದ್ದು, ಅರ್ಹ ತೋಟಗಾರಿಕಾ ಬೆಳೆಗಾರರಿಂದ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಫಲಾನುಭವಿಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 1,000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿ ಹಾಗೂ ಮೈಲುತುತ್ತ ಖರೀದಿಸಿದ ಬಗ್ಗೆ ಟಿನ್ ನಂಬರ್ ಹೊಂದಿರುವ ಬಿಲ್ಲುಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅನುದಾನದ ಲಭ್ಯತೆಯ ಮೇರೆಗೆ ಹಾಗೂ ಜೇಷ್ಠತೆಯ ಆಧಾರದ ಮೇಲೆ ಅರ್ಜಿಗಳನ್ನು ಪರಿಗಣಿಸಿ ಸಹಾಯಧನ ವಿತರಿಸಲಾಗುವುದು. ನಿಗದಿತ ನಮೂನೆಯ ಅರ್ಜಿಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ಹಾಗೂ ವಿವರಗಳಿಗಾಗಿ ಆಯಾ ತಾಲೂಕಿನ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸುವಂತೆ ತೋಟಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.