ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನುದಾನ ನೀಡುವಲ್ಲಿ ತಾರತಮ್ಯ: ಡಾ. ತಿಪ್ಪೇಶ್

Rashmi Kasaragodu
Updated On : 29 Jun 2013, 10:30 am

ಕ.ಪ್ರ. ವಾರ್ತೆ   ಶಿಕಾರಿಪುರ   ಜೂ.28
ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಉನ್ನತೀಕರಿಸಿದ ಸರ್ಕಾರ, ಅನುದಾನ ನೀಡುವಲ್ಲಿನ ತಾರತಮ್ಯ ನೀತಿಯಿಂದಾಗಿ ಜನಸಾಮಾನ್ಯರಿಗೆ, ಬಡರೋಗಿಗಳಿಗೆ ಸಂಪೂರ್ಣ ಗುಣಮಟ್ಟದ ಸೇವೆ ಒದಗಿಸುವಲ್ಲಿ ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂದು ಜಿಲ್ಲಾ ಮಟ್ಟದ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ತಿಪ್ಪೇಶ್ ವಿಷಾದ ವ್ಯಕ್ತಪಡಿಸಿದರು.
ಶಿಕಾರಿಪುರ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಆರೋಗ್ಯ ಇಲಾಖೆ ಜತೆಗಿನ ಪರ್ತಕರ್ತರ ಮಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿತ್ರಣ ಬದಲು: ಶಾಸಕ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಂಪೂರ್ಣ ತಾಲೂಕಿನ ಚಿತ್ರಣ ಬದಲಿಸುವ ಮಹಾತ್ವಾಕಾಂಕ್ಷೆಯಿಂದ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನು 150 ಕ್ಕೇರಿಸಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದ ದಿಸೆಯಲ್ಲಿ ಇದೀಗ ಸೊರಬ, ಹಿರೇಕೇರೂರು, ರಾಣಿಬೆನ್ನೂರು, ಹೊನ್ನಾಳಿ ಮತ್ತಿತರ ಸುತ್ತಮುತ್ತಲಿನ ನಿತ್ಯ ಸರಾಸರಿ 500 ರೋಗಿಗಳು ಚಿಕಿತ್ಸೆ ಪಡೆಯುವ ಬಹು ದೊಡ್ಡ  ಸರ್ಕಾರಿ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಉನ್ನತ ವ್ಯಾಸಂಗಕ್ಕಾಗಿ ಅತ್ಯಗತ್ಯವಾದ ಆಸ್ಪತ್ರೆಯ ಏಕೈಕ ವೈದ್ಯ ಶಾಸ್ತ್ರ ತಜ್ಞರು ತೆರಳಿದ ಕಾರಣ ಹಾಗೂ ಏಕೈಕ ಅರವಳಿಕೆ ತಜ್ಞರಿಂದ ರೋಗಿಗಳನ್ನು ಅವರ ಅಭಿಲಾಷೆಗೆ ಅನುಗುಣವಾಗಿ ಚಿಕಿತ್ಸೆ ನೀಡುವುದು ಅಸಾಧ್ಯವಾಗಿದೆ ಎಂದ ಅವರು, ಇದರಿಂದಾಗಿ ಕೆಲ ರೋಗಿಗಳನ್ನು ಶಿವಮೊಗ್ಗ, ಮಣಿಪಾಲ ಮೊದಲಾದ  ಕಡೆಗೆ ಶಿಫಾರಸು ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.
ವಾರ್ಷಿಕ ರು. 1.3ಕೋಟಿ ಅನುದಾನ: ಜಿಲ್ಲಾ ಆಸ್ಪತ್ರೆಗೆ ಸರ್ಕಾರ ವಾರ್ಷಿಕ ರು. 1.3 ಕೋಟಿ ಅನುದಾನ ನೀಡುತ್ತಿದ್ದು, ಎಲ್ಲಾ ಸೌಲಭ್ಯ ಹೊಂದಿ ಜಿಲ್ಲಾ ಆಸ್ಪತ್ರೆಗೆ ಸರಿಸಮಾನವಾಗಿ ರೋಗಿಗಳಿಗೆ ಚಕಿತ್ಸೆ ನೀಡುವ ತಾಲೂಕು ಆಸ್ಪತ್ರೆಗೆ ಕೇವಲ ರು. 10 ಲಕ್ಷ ನೀಡುತ್ತಿರುವ ಸರ್ಕಾರದ ನಿರ್ಧಾರದಿಂದ ಕೆಲ ರೋಗಿಗಳಿಗೆ ಅತಿ ಅವಶ್ಯ ಔಷಧಿಗಳನ್ನು ಖಾಸಗಿಯಾಗಿ ಖರೀದಿಸಲು ಸೂಚಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಇತರೆ ವೆಚ್ಚದಲ್ಲಿ ಸರ್ಕಾರದ ಮಡಿಲು ಮತ್ತಿತರ ಕೆಲ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿದೂಗಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
18 ಪ್ರಾಥಮಿಕ ಕೇಂದ್ರ: ತಾಲೂಕು ವೈದ್ಯಾಧಿಕಾರಿ ಡಾ. ನಾಗರಾಜನಾಯ್ಕ ಮಾತನಾಡಿ, ತಾಲೂಕಿನಲ್ಲಿ 18 ಪ್ರಾಥಮಿಕ ಆರೋಗ್ಯ ಕೇಂದ್ರ, 50 ಉಪಕೇಂದ್ರವಿದ್ದು, ಹಲವೆಡೆ ಸಿಬ್ಬಂದಿ ಕೊರತೆ ನಡುವೆಯೂ ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 5 ಪ್ರಾ.ಆ.ಕೇ ನಿರಂತರ ಸೇವೆ ನೀಡುತ್ತಿದ್ದು, ಈ ದಿಸೆಯಲ್ಲಿ ಕಪ್ಪನಹಳ್ಳಿ ಕೇಂದ್ರ ಅತೀ ಹೆಚ್ಚು ಹೆರಿಗೆಯ ಮೂಲಕ ಕಳೆದ ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಉತ್ತಮ ಗುಣಮಟ್ಟ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಮೂಲಕ ಎಲ್ಲಾ ಪ್ರಾ.ಆ.ಕೇ ಖಾಸಗಿ ಆಸ್ಪತ್ರೆಯ ಗುಣಮಟ್ಟವನ್ನು ಹೊಂದಿದ್ದು, ತಾಲೂಕಿನಲ್ಲಿ ಶೇ.97.5 ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಎಂದ ಅವರು ಪ್ರತಿ ಗರ್ಭಿಣಿ ಹಾಗೂ ಪ್ರಸೂತಿ ನಂತರದ ಮಹಿಳೆಯರಿಗೆ ಕಡ್ಡಾಯವಾಗಿ ಆಶಾ ಕಾರ್ಯಕರ್ತೆಯರ ಮೂಲಕ ಸಾವಿರಾರೂ ರೂ. ಮೌಲ್ಯದ ಮಡಿಲು ಕಿಟ್, ಸೀಮೀತ ಅವಧಿಯಲ್ಲಿ ಉಚಿತ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದರು.
ತಾ.ಕಾ.ಪ.ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು. ಸಂಘದ ಬಾಲಕೃಷ್ಣ ಜೋಯಿಸ್,ಅರುಣಕುಮಾರ್, ಚಂದ್ರಶೇಖರ್, ರಾಜಪ್ಪ, ಶಿವಣ್ಣ, ನರಸಿಂಹ, ರಘು, ನವೀನ್, ಪ್ರಕಾಶ್, ದೀಪು ದೀಕ್ಷಿತ್ ಮೊದಲಾದವರು ಉಪಸ್ಥಿತರದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement